ಲಕ್ನೋ: 1995 ರ ರಾಜ್ಯ ಅತಿಥಿಗೃಹದ ಘಟನೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಹಿಂಪಡೆಯಲು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಬಿಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ,  1995 ರ ಮುಲಾಯಂ ಸಿಂಗ್ ವಿರುದ್ಧದ ಪ್ರಕರಣವನ್ನು ಹಿಂಪಡೆಯಲು ತಮ್ಮ ಪಕ್ಷದ ಮುಖ್ಯಸ್ಥರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು ಎಂದು ಸ್ಪಷ್ಟಪಡಿಸಿದರು. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇನ್ನೂ ಬಾಕಿ ಇದೆ ಎಂದು ಮತ್ತೊಬ್ಬ ಬಿಎಸ್‌ಪಿ ಮುಖಂಡ ತಿಳಿಸಿದ್ದಾರೆ.


ಸಮಾಜವಾದಿ ಪಕ್ಷದ ಮುಖ್ಯ ವಕ್ತಾರ ರಾಜೇಂದ್ರ ಚೌಧರಿ ಮಾತನಾಡಿ, "ಮಾಯಾವತಿಯವರು ಮುಲಾಯಂ ಸಿಂಗ್ ಅವರ ಪ್ರಕರಣವನ್ನು ಹಿಂಪಡೆಯುವುದಾಗಿ ತಿಳಿಸಿದ್ದರು. ಆದರೆ ಈವರೆಗೂ ಯಾವುದೇ ವಿವರ ಲಭ್ಯವಾಗಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ" ಎಂದು ತಿಳಿಸಿದರು.


ಮೂಲಗಳ ಪ್ರಕಾರ, ಲೋಕಸಭಾ ಚುನಾವಣೆಗೆ ಮುನ್ನ ಅಖಿಲೇಶ್ ಯಾದವ್ ಅವರು ತಮ್ಮ ತಂದೆಯ ವಿರುದ್ಧದ 24 ವರ್ಷದ ಪ್ರಕರಣವನ್ನು ಹಿಂಪಡೆಯುವಂತೆ ಕೋರಿದ್ದರು ಎಂದು ಮಾಯಾವತಿ ಗುರುವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದಾರೆ. 


ಈ ಬಗ್ಗೆ ಪರಿಶೀಲನೆ ನಡೆಸಲು ಪಕ್ಷದ ರಾಜ್ಯಸಭಾ ಸಂಸದ ಸತೀಶ್ ಮಿಶ್ರಾ ಅವರನ್ನು ಕೇಳಿಕೊಂಡಿರುವುದಾಗಿ ಮಾಯಾವತಿ ತಿಳಿಸಿದ್ದಾರೆ ಎನ್ನಲಾಗಿದೆ.


ಏನಿದು ಪ್ರಕರಣ?
ಎಸ್‌ಪಿ-ಬಿಎಸ್‌ಪಿ ಸಮ್ಮಿಶ್ರ ಸರ್ಕಾರ ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗ 1995 ರ ಜೂನ್ 2 ರಂದು ರಾಜ್ಯ ಅತಿಥಿಗೃಹದ ಘಟನೆ ನಡೆದಿದೆ.


ಸಮಾಜವಾದಿ ಮುಖಂಡರು ರಾಜ್ಯ ಅತಿಥಿಗೃಹದ ಮೇಲೆ ದಾಳಿ ಮಾಡಿದರು. ಆ ಸಂದರ್ಭದಲ್ಲಿ ತಮ್ಮ ರಕ್ಷಣೆಗಾಗಿ ಬಿಎಸ್‌ಪಿ ಶಾಸಕರು ತಮ್ಮ ಕೋಣೆಗೆ ಬೀಗ ಹಾಕಿದರು. ಹಲವು ಗಂಟೆಗಳ ನಂತರ, ಅವರನ್ನು ಬಿಜೆಪಿ ಮುಖಂಡರು ರಕ್ಷಿಸಿದರು ಮತ್ತು ನಂತರ ಮುಲಾಯಂ ಸಿಂಗ್ ಸರ್ಕಾರವನ್ನು ವಜಾಗೊಳಿಸಿದ ನಂತರ ಬಿಜೆಪಿಯ ಬೆಂಬಲದೊಂದಿಗೆ ಮಾಯಾವತಿ ಮುಖ್ಯಮಂತ್ರಿಯಾದರು.


ಲಕ್ನೋ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಘಟನೆ ತನ್ನನ್ನು ಕೊಲ್ಲಲು ರೂಪಿಸಿದ್ದ ಸಂಚು ಎಂದು ಮಾಯಾವತಿ ಹೇಳಿದ್ದಾರೆ. ಆ ಕಾಲದ ಹಲವಾರು ಪ್ರಮುಖ ಎಸ್‌ಪಿ ನಾಯಕರನ್ನು ಸಹ ಪ್ರಕರಣದ ಆರೋಪಿಗಳೆಂದು ಹೆಸರಿಸಲಾಗಿದೆ.


ಈ ಘಟನೆಯು ಉತ್ತರಪ್ರದೇಶದಲ್ಲಿ ರಾಜಕೀಯ ಸಮೀಕರಣವನ್ನೇ ಬದಲಾಯಿಸಿತು. ಎಸ್‌ಪಿ-ಬಿಎಸ್‌ಪಿ 2019 ರವರೆಗೆ  ಅಖಿಲೇಶ್ ಯಾದವ್ ಮಾಯಾವತಿಯೊಂದಿಗೆ ಮೈತ್ರಿ ಮಾಡಿಕೊಳ್ಳುವವರೆಗೂ ಪರಸ್ಪರ ವಿರೋಧ ಭಾವವನ್ನು ಹೊಂದಿದ್ದವು. ಗಮನಾರ್ಹವಾದ ಅಂಶವೆಂದರೆ 1995 ರ ಘಟನೆ ನಡೆದಾಗ ಅಖಿಲೇಶ್ ಯಾದವ್ ರಾಜಕೀಯದಲ್ಲಿ ಇರಲಿಲ್ಲ.