ಸಂಧಾನದಿಂದ ಅಯೋಧ್ಯೆ ವಿವಾದ ಬಗೆಹರಿಸುವುದು ಅಸಾಧ್ಯ: ಶಿವಸೇನೆ
ದೇಶದ ರಾಜಕಾರಣಿಗಳು, ಆಡಳಿತಗಾರರು ಮತ್ತು ಸುಪ್ರೀಂ ಕೋರ್ಟ್ ನಿಂದ ಸಹ ಇದುವರೆಗೂ ಈ ವಿವಾದವನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಮೂವರು ಸಂಧಾನಕಾರರಿಂದ ಅದು ಹೇಗೆ ಸಾಧ್ಯ? ಎಂದು ಶಿವಸೇನೆ ಪ್ರಶ್ನಿಸಿದೆ.
ಮುಂಬೈ: ರಾಮಜನ್ಮಭೂಮಿ ವಿವಾದ ಭಾವನಾತ್ಮಕ ವಿಷಯ ಆಗಿರುವುದರಿಂದ ಅದನ್ನು ಸಂಧಾನದ ಮೂಲಕ ಬಗೆಹರಿಸಲು ಸಾಧ್ಯವಿಲ್ಲ, ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.
ದೇಶದ ರಾಜಕಾರಣಿಗಳು, ಆಡಳಿತಗಾರರು ಮತ್ತು ಸುಪ್ರೀಂ ಕೋರ್ಟ್ ನಿಂದ ಸಹ ಇದುವರೆಗೂ ಈ ವಿವಾದವನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ ಮೂವರು ಸಂಧಾನಕಾರರಿಂದ ಅದು ಹೇಗೆ ಸಾಧ್ಯ? ಸಂಧಾನದ ಮೂಲಕ ವಿವಾದ ಇತ್ಯರ್ಥಪಡಿಸುವುದಾದರೆ ಕಳೆದ 25 ವರ್ಷಗಳಿಂದ ಏಕೆ ಸಮಸ್ಯೆಯಾಗಿಯೇ ಉಳಿದಿದೆ? ಇದಕ್ಕಾಗಿ ನೂರಾರು ಜನ ಪ್ರಾಣ ಕಳೆದುಕೊಳ್ಳಬೇಕಿತ್ತೆ? ಎಂದು ಪಕ್ಷ ಪ್ರಶ್ನಿಸಿದೆ.
ಬಾಬರಿ ಮಸೀದಿ - ರಾಮಜನ್ಮಭೂಮಿ ಭೂ ಒಡೆತನದ ವಿವಾದವನ್ನು ಸಂಧಾನದ ಮೂಲಕ ಬಗೆ ಹರಿಸುವ ಪ್ರಯತ್ನವಾಗಿ ಶುಕ್ರವಾರ ಸುಪ್ರೀಂ ಕೋರ್ಟ್, ಮಾಜಿ ನ್ಯಾಯಾಮೂರ್ತಿ ಎಫ್ಎಂಐ ಖಲೀಫುಲ್ಲ, ಆರ್ಟ್ ಆಫ್ ಲಿವಿಂಗ್ ಫೌಂಡೇಶನ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಮತ್ತು ಹಿರಿಯ ನ್ಯಾಯವಾದಿ ಶ್ರೀರಾಮ್ ಪಂಚು ಅವರನ್ನೊಳಗೊಂಡಂತೆ ಮೂವರು ಸದಸ್ಯರ ಸಂಧಾನಕಾರರ ಸಮಿತಿಯೊಂದನ್ನು ರಚಿಸಿ, ಈ ಮೂಲಕವೇ ವಿವಾದ ಇತ್ಯರ್ಥವಾಗಬೇಕು ಎಂಬ ಮಹತ್ವದ ತೀರ್ಪು ನೀಡಿತ್ತು.