ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡಯುವ ನಡೆದ ಹಿಂಸಾತ್ಮಕ ಸಂಘರ್ಷದ ಬಳಿಕ LAC ಬಳಿ ಉದ್ವಿಗ್ನತೆಯ ವಾತಾವರಣ ಏರ್ಪಟ್ಟಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, CDS ಜನರಲ್ ಬಿಪಿನ್ ರಾವತ್ ಹಾಗೂ ಮೂರು ಸೇನೆಗಳ ಮುಖ್ಯಸ್ಥರ ಪ್ರಮುಖ ಸಭೆ ನಡೆದಿದೆ. ಈ ಸಭೆಯಲ್ಲಿ ಗಡಿ ಭಾಗದಲ್ಲಿನ ಸಂಪೂರ್ಣ ಪರಿಸ್ಥಿತಿಯ ಕುರಿತು ಅವಲೋಕನ ನಡೆದಿದೆ ಎನ್ನಲಾಗಿದೆ. ಪ್ರಧಾನ ನರೇಂದ್ರ ಮೋದಿ ಅವರೂ ಕೂಡ ಪರಿಸ್ಥಿತಿಯ ಮೇಲೆ ನಿಗಾವಹಿಸಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಸದ್ಯ ಎರಡೂ ಸೇನೆಗಳ ನಡುವೆ ಹೆಚ್ಚಾಗಿರುವ ಉದ್ವಿಗ್ನತೆಯ ಕಾರಣ ಉಭಯ ದೇಶಗಳ ನಡುವಿನ ಸೇನಾ ಮಟ್ಟದ ಮಾತುಕತೆಯನ್ನು ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದ್ದು, LAC ಬಳಿ ಹೈಅಲರ್ಟ್ ಘೋಷಿಸಲಾಗಿದೆ. ಹಿಮಾಚಲ ಪ್ರದೇಶದ ಕಿನ್ನೌರ್ ಹಾಗೂ ಲಾಹೌಲ್ ಸ್ಪಿತಿ, ಉತ್ತರಾಖಂಡದ ಚಮೋಲಿ ಹಾಗೂ ಪಿತ್ತೊರ್ ಘಡ್, ಸಿಕ್ಕಿಂ, ಅರುಣಾಚಲ ಪ್ರದೇಶಗಳಲ್ಲಿ ಸೇನೆಯನ್ನು ಸಂಪೂರ್ಣ ಸಿದ್ಧಗೊಳಿಸಲಾಗಿದೆ. ದೇಶದ ಉತ್ತರ, ಪಶ್ಚಿಮ ಹಾಗೂ ಪೂರ್ವ ಭಾಗದಲ್ಲಿರುವ ಏರ್ ಬೇಸ್ ಗಳನ್ನು ಎಲ್ಲ ರೀತಿಯ ಪರಿಸ್ಥಿತಿಗೆ ಸಿದ್ಧಗೊಳಿಸಲಾಗಿದೆ. ಇದಲ್ಲದೆ, ನೌಕಾಪಡೆಯ ಹಡಗುಗಳನ್ನು ಸಿದ್ಧಗೊಳಿಸಲಾಗಿದ್ದು, ಸಮುದ್ರದಲ್ಲಿ ಗಸ್ತು ಹೆಚ್ಚಿಸಲಾಗಿದೆ.


ಇದಕ್ಕೂ ಮೊದಲು ಮೂಲಗಳಿಂದ ಸಿಕ್ಕ ಮಾಹಿತಿ ಪ್ರಕಾರ ಗಲ್ವಾನ್ ಕಣಿವೆಯಲ್ಲಿ ರಾತ್ರಿಯ ವೇಳೆ ನಡೆದ ಘರ್ಷಣೆಯಲ್ಲಿ ಹಲವು ಸೈನಿಕರು ನದಿ ಹಾಗೂ ಕಣಿವೆಯಲ್ಲಿ ಬಿದ್ದು ಹುತಾತ್ಮರಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ಚೀನಾ ಸೈನಿಕರು ಮೊಳೆಗಳನ್ನು ಹೊಡೆದ ಬೆತ್ತ, ತಂತಿ ಸುತ್ತಿದ ರಾಡ್ ಗಳ ಮೂಲಕ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.


ಮೂಲಗಳ ಪ್ರಕಾರ ಈ ಘರ್ಷಣೆಯಲ್ಲಿ ಭಾರತದ ಸುಮಾರು 20 ಯೋಧರು ಹುತಾತ್ಮರಾಗಿದ್ದಾರೆ. ಅಷ್ಟೇ ಅಲ್ಲ ಸುದ್ದಿ ಸಂಸ್ಥೆ ANIನಲ್ಲಿ ಪ್ರಕಟಗೊಂಡ ಮಾಹಿತಿ ಪ್ರಕಾರ, ಈ ಹಿಂಸಾತ್ಮಕ ಸಂಘರ್ಷದಲ್ಲಿ ಚೀನಾ ಸೇನೆಯ ಕಮಾಂಡಿಂಗ್ ಅಧಿಕಾರಿ ಸೇರಿದಂತೆ ಒಟ್ಟು 40 ಸೈನಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.