ನವದೆಹಲಿ: ಪುಲ್ವಾಮಾ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದ ಘಟನೆಗೆ ಸಂಬಂಧಿಸಿದಂತೆ ಭಾರತ ಮಂಗಳವಾರ ಪಾಕಿಸ್ತಾನ ಉಗ್ರರ ವಿರುದ್ಧ ಪ್ರತೀಕಾರ ತೆಗೆದುಕೊಂಡಿದೆ. ಪಾಕಿಸ್ತಾನದ ಗಡಿಯೊಳಗೆ ನುಗ್ಗಿ 21 ನಿಮಿಷಗಳ ಕಾಲ ಯಶಸ್ವಿ ಕಾರ್ಯಚರಣೆ ನಡೆಸಿದ ಭಾರತೀಯ ವಾಯುಪಡೆ 200-300 ಉಗ್ರರನ್ನು ಖಲಾಸ್ ಮಾಡಿದೆ.


COMMERCIAL BREAK
SCROLL TO CONTINUE READING

ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಒಟ್ಟು 12 ಮಿರಾಜ್‌ ಯುದ್ಧ ವಿಮಾನಗಳು ಪಾಕಿಸ್ತಾನಕ್ಕೆ ನುಗ್ಗಿ 'ಏರ್ ಸ್ಟ್ರೈಕ್' ನಡೆಸುವ ಮೂಲಕ ಬಾಂಬ್‌ಗಳ ಸುರಿಮಳೆಗರೆದ ಭಾರತೀಯ ಸೇನೆ,  ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಲಾಂಚಿಂಗ್‌ ಪ್ಯಾಡ್‌ಗಳು ಛಿದ್ರ ಛಿದ್ರಗೊಳಿಸಿದೆ. ಪೋಕ್ ಪ್ರವೇಶಿಸಿ ಸುಮಾರು 1000 ಕೆಜಿ ಬಾಂಬ್‌ ಅನ್ನು ಉಗ್ರರ ಮೇಲೆ ಹಾಕಿರುವ ಸೇನೆ ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್ ಮತ್ತು ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದೆ ಎನ್ನಲಾಗಿದೆ. 


ಇನ್ನು ಈ ಕಾರ್ಯಾಚರಣೆಯಲ್ಲಿ ಉಗ್ರ ಸಂಘಟನೆಯ ಆಲ್ಫಾ 3 ಕಂಟ್ರೋಲ್ ರೂಮ್ ಗಳನ್ನು ಉಡಾಯಿಸಲಾಗಿದೆ ಎನ್ನಲಾಗುತ್ತಿದ್ದು,  ಸುಮಾರು 200 ರಿಂದ 300 ಪಾಕ್ ಭಯೋತ್ಪಾದಕರು ಈ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಭಾರತೀಯ ವಾಯುಪಡೆ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮಾಹಿತಿ ನೀಡಿದ್ದಾರೆ. 



ಭಾರತೀಯ ಯುದ್ಧವಿಮಾನಗಳು ಗಡಿನಿಯಂತ್ರಣ ರೇಖೆಯನ್ನು ಉಲ್ಲಂಘಿಸಿವೆ ಮತ್ತು ಇದಕ್ಕೆ ಪಾಕ್ ವಾಯುಪಡೆ ಪ್ರತ್ಯುತ್ತರ ನೀಡಿ ಅವುಗಳನ್ನು ಹಿಮ್ಮೆಟ್ಟಿಸಿವೆ ಎಂದು ಪಾಕ್ ಸೇನೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಟ್ವೀಟ್ ಮಾಡಿದ್ದಾರೆ.



ಇದೇ ವೇಳೆ ಭಾರತದ ಸರ್ಜಿಕಲ್‌ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಕೂಡ ದಾಳಿ ನಡೆಸಬಹುದು ಎಂಬ ಶಂಕೆಯ ಮೇರೆಗೆ ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಗಳು ಸಜ್ಜಾಗಿರುವಂತೆ ಸೂಚಿಸಲಾಗಿದೆ.