ನವದೆಹಲಿ: ಒಂದು ವೇಳೆ ನೀವೂ ಕೂಡ ರೇಲ್ವೆ ನೇಮಕಾತಿ ಮಂಡಳಿ, ಸಿಬ್ಬಂದಿ ನೇಮಕಾತಿ ಆಯೋಗ ಹಾಗೂ IBPS ನಡೆಸುವ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಾಗಿದ್ದರೆ, ಶೀಘ್ರದಲ್ಲಿಯೇ ನೀವು ಇದಕ್ಕಾಗಿ ಪ್ರಾಥಮಿಕ ಹಂತದಲ್ಲಿ ನೀವು ಬೇರೆ ಬೇರೆ ಪರೀಕ್ಷೆಗಳಿಗೆ ಹಾಜರಾಗಬೇಕಾಗುವ ಅವಶ್ಯಕತೆ ಇಲ್ಲ. ಕಾರಣ ಪ್ರಧಾನಿ ನೇತೃತ್ವದಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಎಲ್ಲಾ ಪರೀಕ್ಷೆಗಳಿಗೆ ಏಕಕಾಲಕ್ಕೆ Common Eligibility Test ನಡೆಸಲು ತೀರ್ಮಾನಿಸಿದೆ.


COMMERCIAL BREAK
SCROLL TO CONTINUE READING

ಗ್ರೂಪ್ ಬಿ ಮತ್ತು ಗ್ರೂಪ್ ಸಿ ಮಟ್ಟದ ಹುದ್ದೆಗಳ ನೇಮಕಾತಿಗಾಗಿ ರೈಲ್ವೆ ನೇಮಕಾತಿ ಮಂಡಳಿ, ಸಿಬ್ಬಂದಿ ನೇಮಕಾತಿ ಆಯೋಗ ಮತ್ತು ಐಬಿಪಿಎಸ್ ನಡೆಸುವ ಪ್ರಾಥಮಿಕ ಹಂತದ ನೇಮಕಾತಿ ಪರೀಕ್ಷೆಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ CET) ನಡೆಸಲು ಸಚಿವ ಸಂಪುಟ ತೀರ್ಮಾನಿಸಿದೆ. ಸಾಮಾನ್ಯವಾಗಿ ಈ ಪೋಸ್ಟ್‌ಗಳನ್ನು ನಾನ್ ಗೆಜೆಟೆಡ್ ಪೋಸ್ಟ್‌ಗಳು ಎಂದು ಕರೆಯಲಾಗುತ್ತದೆ.


CET ಆಯೋಜಿಸಲು ರಾಷ್ಟ್ರೀಯ ಭರ್ತಿ ಏಜೆನ್ಸಿ (National Recruitment Agency) ರಚಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಆರಂಭದಲ್ಲಿ ಈ ಸಂಸ್ಥೆ ರೈಲ್ವೆ ನೇಮಕಾತಿ ಮಂಡಳಿ, ಸಿಬ್ಬಂದಿ ನೇಮಕಾತಿ ಆಯೋಗ ಮತ್ತು ಐಬಿಪಿಎಸ್ ಪರವಾಗಿ ಪರೀಕ್ಷೆಗಳನ್ನು ನಡೆಸಲಿದೆ. ಆದರೆ ಕೇಂದ್ರದ ಎಲ್ಲಾ ನೇಮಕಾತಿ ಸಂಸ್ಥೆಗಳನ್ನು ನಂತರದಲ್ಲಿ ಈ ಸಂಸ್ಥೆಗೆ ಜೋಡಿಸಲಾಗುವುದು ಎಂದು ಕಾರ್ಮಿಕ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ.


ರಾಷ್ಟ್ರೀಯ ಭರ್ತಿ ಆಯೋಗ ಹೇಗೆ ಕಾರ್ಯನಿರ್ವಹಿಸಲಿದೆ?
ಮೂರು ನೇಮಕಾತಿ ಏಜೆನ್ಸಿಗಳು ನಡೆಸುವ ಪ್ರಾಥಮಿಕ ಹಂತದ ಪರೀಕ್ಷೆಯನ್ನು ರಾಷ್ಟ್ರೀಯ ನೇಮಕಾತಿ ಸಂಸ್ಥೆ ನಡೆಸಲಿದೆ. ಪರೀಕ್ಷೆಯಲ್ಲಿ ಹಾಜರಾಗುವ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ, ಮೂರು ಏಜೆನ್ಸಿಗಳು ತಮ್ಮ ಮುಂದಿನ ಹಂತದ ಪರೀಕ್ಷೆಗೆ ಪ್ರತ್ಯೇಕ ಅರ್ಜಿಗಳನ್ನು ಪಡೆಯಲಿವೆ. ಸರ್ಕಾರದ ಪ್ರಕಾರ, ಮೂರು ಏಜೆನ್ಸಿಗಳು ತಮ್ಮ ಬೇಡಿಕೆಗೆ ಅನುಗುಣವಾಗಿ ಮುಂದಿನ ಹಂತದ ಪರೀಕ್ಷೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದಾಗಿದೆ. ಪ್ರಸ್ತುತ ಈ ಮೂರು ಸಂಸ್ಥೆಗಳ ಪ್ರಾಥಮಿಕ ಹಂತದ ಪರೀಕ್ಷೆಗಳಿಗಾಗಿ ಪ್ರತ್ಯೇಕವಾಗಿ ಹಾಜರಾಗಬೇಕಾಗುತದೆ. ನೂತನ ಏಜೆನ್ಸಿ ರಚನೆಯ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ ಎಂದು ಕಾರ್ಮಿಕ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. 


ಆದರೆ ರೈಲ್ವೆ ನೇಮಕಾತಿ ಮಂಡಳಿ, ಸಿಬ್ಬಂದಿ ನೇಮಕಾತಿ ಆಯೋಗ ಹಾಗೂ ಐಬಿಪಿಎಸ್ ರದ್ದುಗೊಳಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಲ್ಲದೆ, ರಾಷ್ಟ್ರೀಯ ನೇಮಕಾತಿ ಏಜೆನ್ಸಿಯ ಮೊದಲ ಹಂತದ ಪರೀಕ್ಷೆ ನಡೆಸಿದ ಬಳಿಕ, ಅವು ಮುಂದಿನ ಹಂತದ ಪರೀಕ್ಷೆಯನ್ನು ಸ್ವತಂತ್ರವಾಗಿ ನಡೆಸಲು ಮುಕ್ತವಾಗಿವೆ ಎಂದು ಸರ್ಕಾರ ಹೇಳಿದೆ. ಈಗಾಗಲೇ ಈ ಎಲ್ಲಾ ಸಂಸ್ಥೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುವ ಕಾರಣ ರಾಷ್ಟ್ರೀಯ ನೇಮಕಾತಿ ಸಂಸ್ಥೆ 2021ರಿಂದ ತನ್ನ ಪರೀಕ್ಷೆಗಳನ್ನು ಆಯೋಜಿಸಲಿದೆ.


ಆರಂಭದಲ್ಲಿ ವರ್ಷಕ್ಕೆ ಎರಡು ಬಾರಿಗೆ Common Eligibility Test ನಡೆಸಲಾಗುವುದು. ಆದರೆ, ಬಳಿಕ ಹುದ್ದೆಗಳ ಆವಶ್ಯಕತೆಗೆ ಅನುಗುಣವಾಗಿ ಈ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ವಯೋಮಿತಿಗೆ ಅನುಗುಣವಾಗಿ ಓರ್ವ ಅಭ್ಯರ್ಥಿ ಎಷ್ಟು ಬೇಕಾದರೂ ಪರೀಕ್ಷೆಯನ್ನು ಬರೆಯಬಹುದು. ಪರೀಕ್ಷೆಯಲ್ಲಿ ಅಭ್ಯರ್ಥಿ ಸರ್ವಶ್ರೇಷ್ಠ ಅಂಕಗಳ ಆಧಾರದ ಮೇಲೆ ಆತನ ಆಯ್ಕೆ ಮಾಡಲಾಗುವುದು. ಅಭ್ಯರ್ಥಿ ಒಂದು ಬಾರಿ ಪಡೆದ ಅಂಕಗಳು ಮೂರು ವರ್ಷದ ಸಿಂಧುತ್ವ ಹೊಂದಿರಲಿವೆ. ಏಜೆನ್ಸಿ ವತಿಯಿಂದ ಮೂರು ವಿವಿಧ ಮಟ್ಟದಲ್ಲಿ ಪರೀಕ್ಷೆಗಳನ್ನು ಆಯೋಜಿಸಲಾಗುವುದು. 8 ನೇ ತರಗತಿ, 12ನೇ ತರಗತಿ ಹಾಗೂ ಪದವಿ ಹೀಗೆ ಮೂರು ವಿವಿಧ ಮಟ್ಟಗಳು ಇರಲಿವೆ. ಪ್ರಸ್ತುತ ಈ ಪರೀಕ್ಷೆಯನ್ನು ದೇಶದ ಒಟ್ಟು 12 ಭಾಷೆಗಳಲ್ಲಿ ನಡೆಸಲಾಗುವುದು ಎಂದು ಸರ್ಕಾರ ಹೇಳಿದೆ.


ಹೊಸ ವ್ಯವಸ್ಥೆಯಡಿಯಲ್ಲಿ, ನೋಂದಣಿಗಾಗಿ ಒಂದೇ  ಪೋರ್ಟಲ್ ಅನ್ನು ರಚಿಸಲಾಗುತ್ತಿದ್ದು, ತನ್ಮೂಲಕ  ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ. ಇದರಲ್ಲಿ ಒಮ್ಮೆ ಮಾತ್ರ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಎಲ್ಲಾ ಪರೀಕ್ಷೆಗಳಿಗೆ ಒಂದೇ ಪಠ್ಯಕ್ರಮ ಅಥವಾ ಸಿಲೆಬಸ್ ಇರಲಿದೆ. ಮೊದಲ ಹಂತದಲ್ಲಿ ದೇಶದಲ್ಲಿ ಸುಮಾರು 1000 ಪರೀಕ್ಷಾ ಕೇಂದ್ರಗಳನ್ನು ನಿರ್ಮಿಸಲಾಗುವುದು. ದೇಶದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಪರೀಕ್ಷಾ ಕೇಂದ್ರವನ್ನಾದರೂ ಸ್ಥಾಪಿಸಲಾಗಿದೆ ಎಂಬುದನ್ನು ಎಂದು ಖಚಿತಪಡಿಸಿಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. ಎಲ್ಲಾ ಅಭ್ಯರ್ಥಿಗಳಿಗೆ ನೋಂದಣಿ ಸಂಖ್ಯೆಯನ್ನು ನೀಡಲಾಗುತ್ತಿರುವ ಕಾರಣ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಕ್ಕೆ ತೆರೆ ಬೀಳಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ.


ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ವಾಸಿಸುವ ಅಭ್ಯರ್ಥಿಗಳು ಪ್ರಾಥಮಿಕ ಪರೀಕ್ಷೆಯಲ್ಲಿ ಭಾಗವಹಿಸಲು ಹೆಚ್ಚು ದೂರ ಹೋಗಬೇಕಾಗಿರುವುದರಿಂದ ಅವರಿಗೆ ಈ ಹೊಸ ವ್ಯವಸ್ಥೆಯಿಂದ ಪ್ರಯೋಜನವಾಗಲಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ. ವಿವಿಧ ಸಂಸ್ಥೆಗಳು ಪರೀಕ್ಷೆಯನ್ನು ತೆಗೆದುಕೊಳ್ಳುವುದರಿಂದ, ಪರೀಕ್ಷೆಗಳ ದಿನಾಂಕಗಳಲ್ಲಿ ಹಲವು ಬಾರಿ ಘರ್ಷಣೆ ಉಂಟಾಗುತ್ತದೆ. ಇದರಿಂದಾಗಿ ಅಭ್ಯರ್ಥಿಗಳು ಯಾವುದಾದರೊಂದು ಪರೀಕ್ಷೆ ಬರೆಯುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ ಒಂದೇ ಪರೀಕ್ಷೆಯನ್ನು ನಡೆಸುವ ಮೂಲಕ, ಇಂತಹ ಸಮಸ್ಯೆಗಳು ನಿವಾರಣೆಯಾಗಳಿವೆ. ಅಲ್ಲದೆ, ವಿವಿಧ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಶುಲ್ಕ ಪಾವತಿಸುವುದು ತಪ್ಪಲಿದೆ. 


ಪ್ರತಿ ವರ್ಷ ಈ ಮೂರು ಏಜೆನ್ಸಿಗಳು 1.25 ಲಕ್ಷ ಹುದ್ದೆಗಳ ನೇಮಕಾತಿಗೆ ಪರೀಕ್ಷೆಯನ್ನು ಆಯೋಜಿಸುತ್ತವೆ. ಇದಕ್ಕಾಗಿ ದೇಶಾದ್ಯಂತ ಸುಮಾರು 2.5 ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ.