ಮೋದಿ ಕೇವಲ ಮ್ಯಾಜಿಕ್ ಟ್ರೈನ್ ಬಿಡ್ತಾರೆ, ಆದರೆ ಬುಲೆಟ್ ಟ್ರೈನ್ ಜಾರಿ ಕಾಂಗ್ರೆಸ್`ನಿಂದ ಮಾತ್ರ ಸಾಧ್ಯ: ರಾಹುಲ್ ಗಾಂಧಿ
ಬುಲೆಟ್ ರೈಲಿನ ಕನಸು ನನಸಾಗಬೇಕೆಂದರೆ ಅದು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.
ಅಮೇಥಿ: ಕೇಂದ್ರ ಸರ್ಕಾರದ ಬುಲೆಟ್ ಟ್ರೈನ್ ಯೋಜನೆಗೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮ್ಯಾಜಿಕ್ ರೈಲನ್ನು ಬಿಡುತ್ತಾರೆ, ಆದರೆ ಬುಲೆಟ್ ರೈಲನ್ನಲ್ಲ. ಬುಲೆಟ್ ರೈಲಿನ ಕನಸು ನನಸಾಗಬೇಕೆಂದರೆ ಅದು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಆರ್ಎಸ್ಎಸ್ ಮತ್ತು ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಿರುದ್ಯೋಗ, ರೈತರ ದುಸ್ಥಿತಿ ಮತ್ತು ಹಣದುಬ್ಬರ ಸಮಸ್ಯೆಗಳನ್ನು ದೇಶ ಎದುರಿಸುತ್ತಿದೆ. ಈ ಸಮಸ್ಯೆಗಳನ್ನು ನಿವಾರಿಸಿದರೆ ದೇಶ ಎಲ್ಲಾ ಸಮಸ್ಯೆಗಳಿಂದ ದೂರವಾಗುತ್ತದೆ ಎಂದರು.
ಮುಂದುವರೆದು ಮಾತನಾಡಿದ ರಾಹುಲ್, "ಮೋದಿ ಸರ್ಕಾರ ಕೆಲವು ಕೈಗಾರಿಕೋದ್ಯಮಿಗಳಿಗೆ ದೇಶದ ಎಲ್ಲಾ ಹಣವನ್ನು ನೀಡಿದೆ. ಇದರಿಂದ ಸಣ್ಣ ಉದ್ಯಮಿಗಳು ಬೀದಿಪಾಲಾಗುತ್ತಿದ್ದಾರೆ. ಕಳೆದ ಸಾಲಿನಲ್ಲಿ ಮೋದಿ ಸರ್ಕಾರ ರೈತರ ಒಂದು ರೂ. ಸಾಲವನ್ನೂ ಮನ್ನಾ ಮಾಡಿಲ್ಲ. ಆದರೆ ಉದ್ಯಮಿಗಳ 2 ಲಕ್ಷ ಕೋಟಿ ರೂ. ಮನ್ನಾ ಮಾಡಿದೆ ಎಂದು ಟೀಕಿಸಿದರು.