ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ನೈಸರ್ಗಿಕ ವಿಕೋಪಗಳಿಂದ ಉಂಟಾದ ಹಾನಿಗೆ ಒಡಿಶಾ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶಕ್ಕೆ 4,432 ಕೋಟಿ ರೂ.ಗಳ ಪರಿಹಾರವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ.


COMMERCIAL BREAK
SCROLL TO CONTINUE READING

ಫನಿ ಚಂಡಮಾರುತದಿಂದ ಉಂಟಾದ ಹಾನಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಒಡಿಶಾಗೆ 3338.22 ಕೋಟಿ ರೂ.ಗಳ ಹೆಚ್ಚುವರಿ ಪರಿಹಾರವನ್ನು ಕೇಂದ್ರ ಅನುಮೋದಿಸಿದೆ ಎಂದು ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಕರ್ನಾಟಕಕ್ಕೆ ಬರ ಪರಿಹಾರವಾಗಿ 1029.39 ಕೋಟಿ ರೂ. ಮತ್ತು ಹಿಮಾಚಲ ಪ್ರದೇಶಕ್ಕೆ 2018-19ರ ಅವಧಿಯಲ್ಲಿ ಸಂಭವಿಸಿದ ಹಿಮಪಾತ ಮತ್ತು ಆಲಿಕಲ್ಲು ಮಳೆಗಾಗಿ 64.49 ಕೋಟಿ ರೂ. ಪರಿಹಾರ ಬಿಡುಗಡೆಗೆ ಅನುಮೋದನೆ ದೊರೆತಿದ್ದು, ಈ ಹಣವನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ ವಿತರಿಸಲಾಗುವುದು.


2018-19ರ ಅವಧಿಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ 9,658 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, 2019-20ರ ಅವಧಿಯಲ್ಲಿ ಇದುವರೆಗೆ ಎಸ್‌ಡಿಆರ್‌ಎಫ್‌ನಿಂದ 24 ರಾಜ್ಯಗಳಿಗೆ 6,104 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಫನಿ ಚಂಡಮಾರುತ ಮುನ್ಸೂಚನೆ ಹಿನ್ನೆಲೆಯಲ್ಲಿ ಎಸ್‌ಡಿಆರ್‌ಎಫ್‌ನಿಂದ ಏಪ್ರಿಲ್ 29 ರಂದು 340.87 ಕೋಟಿ ರೂ.ಗಳನ್ನು ಒಡಿಶಾಗೆ ಬಿಡುಗಡೆ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಮೇ 6 ರಂದು ರಾಜ್ಯಕ್ಕೆ ಭೇಟಿ ನೀಡಿದ್ದು, ಅವರು ಘೋಷಿಸಿದಂತೆ ತಕ್ಷಣವೇ 1,000 ಕೋಟಿ ರೂ. ಮುಂಗಡ ಪರಿಹಾರ ಬಿಡುಗಡೆ ಮಾಡಲಾಗಿದೆ.


ಹೆಚ್ಚುವರಿಯಾಗಿ, ಚಂಡಮಾರುತದಲ್ಲಿ ಮೃತಪಟ್ಟವರ ಕುಟುಂಬದವರಿಗೆ 2 ಲಕ್ಷ ರೂ. ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ.ಗಳನ್ನು ಪಿಎಂನ ಪರಿಹಾರ ನಿಧಿಯಿಂದ ನೀಡಲಾಗಿದೆ.


'ಫನಿ' ಚಂಡಮಾರುತದ ಸಂದರ್ಭದಲ್ಲಿ ಕೇಂದ್ರವು ಎನ್‌ಡಿಆರ್‌ಎಫ್ ನ 71 ತಂಡಗಳು, ಸೈನ್ಯದ 19 ಕಾಲಮ್‌ಗಳು, ಒಂಬತ್ತು ಎಂಜಿನಿಯರಿಂಗ್ ಕಾರ್ಯಪಡೆ (ಇಟಿಎಫ್), 27 ವಿಮಾನ / ಹೆಲಿಕಾಪ್ಟರ್‌ಗಳು ಮತ್ತು 16 ಸಶಸ್ತ್ರ ಪಡೆಗಳನ್ನು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಿತ್ತು ಎಂದು ಹೇಳಿಕೆ ತಿಳಿಸಿದೆ.