ಈರುಳ್ಳಿ ರಫ್ತಿನ ಮೇಲೆ ನಿಷೇಧ ವಿಧಿಸಿದ ಕೇಂದ್ರ ಸರ್ಕಾರ
ಈರುಳ್ಳಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ತಡೆ ವಿಧಿಸಿದೆ. ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆ ಸರ್ಕಾರದ ಈ ನಿರ್ಣಯ ಭಾರಿ ಮಹತ್ವ ಪಡೆದುಕೊಂಡಿದೆ.
ನವದೆಹಲಿ: ಎಲ್ಲಾ ರೀತಿಯ ಈರುಳ್ಳಿಯ ರಫ್ತಿನ ಮೇಲೆ ಕೇಂದ್ರ ಸರ್ಕಾರ ಕೂಡಲೇ ಜಾರಿಗೆ ಬರುವಂತೆ ನಿಷೇಧವಿದಿಸಿದೆ. ಈ ಕುರಿತಾದ ಅಧಿಸೂಚನೆಯನ್ನು ಜಾರಿಗೊಳಿಸಲಾಗಿದೆ. ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಈರುಳ್ಳಿಯ ಬೆಲೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಭಾರಿ ಮಹತ್ವಪಡೆದುಕೊಂಡಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಈರುಳ್ಳಿ ಪ್ರತಿ ಕೆ.ಜಿಗೆ ರೂ.40 ರಂತೆ ಮಾರಾಟವಾಗುತ್ತಿದೆ. ಇನ್ನೊಂದೆಡೆ ದೇಶದ ಇತರೆ ಭಾಗಗಳಲ್ಲಿ ಹಲವು ನಗರಗಳಲ್ಲಿ ಈರುಳ್ಳಿ ಪ್ರತಿ ಕೆ.ಜಿ.ಗೆ 50 ರೂ. ನಂತೆ ಮಾರಾಟವಾಗುತ್ತಿದೆ.
ಭಾರತ ಬಾಂಗ್ಲಾದೇಶ, ಮಲೇಷಿಯಾ, ಯುಎಇ ಹಾಗೂ ಶ್ರೀಲಂಕಾ ರಾಷ್ಟ್ರಗಳಿಗೆ ಈರುಳ್ಳಿ ರಫ್ತು ಮಾಡುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ. ಕಳೆದ ಏಪ್ರಿಲ್-ಜೂನ್ ಅವಧಿಯಲ್ಲಿ ಭಾರತ ಒಟ್ಟು 19.8 ಕೋಟಿ ಡಾಲರ್ ಮೌಲ್ಯದ ಈರುಳ್ಳಿಯನ್ನು ರಫ್ತು ಮಾಡಿದೆ.