ನವದೆಹಲಿ: ಇತ್ತೀಚೆಗಷ್ಟೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಯಸ್ ಬ್ಯಾಂಕ್ ಪುನಃ ತನ್ನ ಕಾರ್ಯ ಆರಂಭಿಸಲು ಸಿದ್ಧವಾಗಿದೆ. ಇದರ ಅರ್ಥ ಪುನಃ ಯಸ್ ಬ್ಯಾಂಕ್ ಗ್ರಾಹಕರು ಬ್ಯಾಂಕಿಂಗ್ ಸೇವೆಯ ಲಾಭ ಪಡೆಯಲಿದ್ದಾರೆ. ಅಷ್ಟೇ ಅಲ್ಲ ಕೇವಲ 50 ಸಾವಿರ ವಿಥ್ ಡ್ರಾ ಮಾಡಬೇಕು ಎಂಬುದಾಗಿ ವಿಧಿಸಲಾಗಿದ್ದ ಮಿತಿಯನ್ನು ಕೂಡ ಶೀಘ್ರದಲ್ಲಿಯೇ ತೆರವುಗೊಳಿಸಲಾಗುವುದು ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

ಬುಧವಾರ ಪುನಃ ಆರಂಭಗೊಳ್ಳಲಿದೆ ಬ್ಯಾಂಕಿಂಗ್ ಸೇವೆ
ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಈ ಕುರಿತು ಹೇಳಿಕೆ ಬಿಡುಗಡೆಮಾಡಿರುವ ಯಸ್ ಬ್ಯಾಂಕ್, ಬುಧವಾರ ಪುನಃ ಬ್ಯಾಂಕಿಂಗ್ ವ್ಯವಹಾರವನ್ನು ಆರಂಭಿಸಲಾಗುವುದು ಎಂದು ಹೇಳಿದೆ. ಮಾರ್ಚ್ 18 ರಿಂದ ಸಾಯಂಕಾಲ 6 ಗಂಟೆಗೆ ಬ್ಯಾಂಕಿಂಗ್ ಪ್ರಕ್ರಿಯೆ ಎಂದಿನಂತೆ ಸಾಮಾನ್ಯವಾಗಿ ನಡೆಯಲಿದೆ ಎಂದು ಬ್ಯಾಂಕ್ ತನ್ನ ಹೇಳಿಕೆಯಲ್ಲಿ ಹೇಳಿಕೊಂಡಿದೆ. ಅಷ್ಟೇ ಅಲ್ಲ ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಡಿಜಿಟಲ್ ಸೇವೆಗಳನ್ನು ಸಹ ಆರಂಭಿಸಲಾಗುವುದು.


ಯಸ್ ಬ್ಯಾಂಕ್ ಪ್ರಕರಣದಲ್ಲಿ ಅನಿಲ್ ಅಂಬಾನಿಗೆ ನೋಟಿಸ್
ಏತನ್ಮಧ್ಯೆ ಯಸ್ ಬ್ಯಾಂಕ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಾರಿ ನಿರ್ದೇಶನಾಲಯ, ರಿಲಯನ್ಸ್ ಗ್ರೂಪ್ ನ ಚೇರ್ಮನ್ ಆಗಿರುವ ಅನಿಲ್ ಅಂಬಾನಿ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಮೂಲಗಳ ಪ್ರಕಾರ ಯಸ್ ಬ್ಯಾಂಕ್ ಗೆ ಸಂಬಂಧಿಸಿದ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಅನಿಲ್ ಅಂಬಾನಿ ಅವರಿಗೆ ಈ ನೋಟಿಸ್ ಜಾರಿಗೊಳಿಸಲಾಗಿದೆ. ಯಸ್ ಬ್ಯಾಂಕ್ ಅತಿ ದೊಡ್ಡ ಪ್ರಮಾಣದಲ್ಲಿ ನಗದು ಹಣವನ್ನು ಅನಿಲ್ ಅಂಬಾನಿ ಅವರ ಗ್ರೂಪ್ ಗೆ ಸಾಲದ ರೂಪದಲ್ಲಿ ನೀಡಿದೆ ಎನ್ನಲಾಗಿದೆ. ಇದುವರೆಗೆ ರಿಲಯನ್ಸ್ ಗ್ರೂಪ್ ತನ್ನ ಸಾಲವನ್ನು ತೀರಿಸಿಲ್ಲ ಎಂದೂ ಕೂಡ ಹೇಳಲಾಗಿದೆ.


ಯಸ್ ಬ್ಯಾಂಕ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ 5ರಂದು ಯಸ್ ಬ್ಯಾಂಕ್ ನ ನಿರ್ದೇಶಕರ ಮಂಡಳಿಯನ್ನು ವಜಾಗೊಳಿಸಿತ್ತು. ಇದಾದ ಬೆನ್ನಲ್ಲೇ ಕೇಂದ್ರೀಯ ಬ್ಯಾಂಕ್ ಯಸ್ ಬ್ಯಾಂಕ್ ಗೆ ಆಡಳಿತ ಅಧಿಕಾರಿಯನ್ನು ನೇಮಿಸಿತ್ತು. ಇದೇ ವೇಳೆ ಯಸ್ ಬ್ಯಾಂಕ್ ಮೇಲೆ ವಿಧಿಸಲಾಗಿರುವ ನಿರ್ಬಂಧನೆಯಿಂದ ಗ್ರಾಹಕರಿಗೆ ಸಾಕಷ್ಟು ತೊಂದರೆ ಉಂಟಾಗಿತ್ತು.