ಭೋಪಾಲ್: ರೈಲಿನಲ್ಲಿ 'ಮೊಟ್ಟೆ ಬಿರಿಯಾನಿ' ಸೇವಿಸಿ ಹಲವು ಪ್ರಯಾಣಿಕರು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ತ್ರಿವಂಡ್ರಮ್ ನಿಂದ ಗೊರಕ್ಪುರಕ್ಕೆ ಚಲಿಸುವ 12512 ರಪ್ತಿ ಎಕ್ಸ್ ಪ್ರೆಸ್ ರೈಲಿನಲ್ಲಿ 'ಮೊಟ್ಟೆ ಬಿರಿಯಾನಿ' ಸೇವಿಸಿದ ಬಳಿಕ ಪ್ರಯಾಣಿಕರಲ್ಲಿ ವಾಂತಿ, ಹೊಟ್ಟೆನೋವು ಕಾಣಿಸಿಕೊಂಡಿದ್ದು, 20 ಕ್ಕೂ ಹೆಚ್ಚು ಪ್ರಯಾಣಿಕರು ಅಸ್ವಸ್ಥರಾಗಿರುವ ಬಗ್ಗೆ ವರದಿಯಾಗಿದೆ. 


COMMERCIAL BREAK
SCROLL TO CONTINUE READING

ಘಟನೆ ಬಗ್ಗೆ ಇಟಾರ್ಸಿ ರೈಲು ನಿಲ್ದಾಣದಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಬಳಿಕ ಅಸ್ವಸ್ಥಗೊಂಡ ಪ್ರಯಾಣಿಕರಿಗೆ ನಾಗ್ಪುರದಲ್ಲಿ ವೈದ್ಯರ ತಂಡವು ಚಿಕಿತ್ಸೆ ನೀಡಿದೆ. ಮಾಹಿತಿಯ ಪ್ರಕಾರ, ಚಿಕಿತ್ಸೆ ಬಳಿಕ ಪ್ರಯಾಣಿಕರು ಸಾಮಾನ್ಯ ಸ್ಥಿತಿಗೆ ಮರಳಿದ್ದಾರೆ ಎನ್ನಲಾಗಿದೆ. 


ನಾಗ್ಪುರ್ ರೈಲ್ವೆ ಮಂಡಳಿಯ ಪಬ್ಲಿಕ್ ರಿಲೇಶನ್ಸ್ ಆಫೀಸರ್ ಅನಿಲ್ ವಾಲ್ಡ್ ಮಾತನಾಡುತ್ತಾ, ಇಟಾರ್ಸಿ ನಿಲ್ದಾಣದಲ್ಲಿ ರೈಲಿನ ಎಸ್ 7 ಕೋಚ್ ನಲ್ಲಿ ಪ್ರಯಾಣಿಕರಿಗೆ ವಾಂತಿ, ಹೊಟ್ಟೆ ನೋವು ಪ್ರಕರಣದ ಬಗ್ಗೆ ದೂರು ದಾಖಲಿಸಿದ ಬಳಿಕ ನಾಗ್ಪುರ್ ರೈಲ್ವೇ ನಿಲ್ದಾಣದ ಆರು ವೈದ್ಯರ ತಂಡ ಪ್ರಯಾಣಿಕರಿಗೆ ಚಿಕಿತ್ಸೆ ನೀಡಿದೆ ಎಂದು ಮಾಹಿತಿ ನೀಡಿದರು.


ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಲ್ಲಿ ಅನಿಲ್ ಥಾಪಾ ಎಂಬ ಓರ್ವ ಯಾತ್ರಿ ಮೃತಪಟ್ಟಿದ್ದಾರೆ, ಅವರ ಮೃತ ದೇಹವನ್ನು ಆಮ್ಲಾ ರೈಲು ನಿಲ್ದಾಣದಲ್ಲಿ ಕರೆದೊಯ್ಯಲಾಗಿದೆ ಎಂದು ಅನಿಲ್ ವಾಲ್ಡ್ ತಿಳಿಸಿದ್ದಾರೆ. ಅದಾಗ್ಯೂ, ಫುಡ್ ಪಾಯಿಸನ್ ಕಾರಣದಿಂದ ಈ ಮರಣ ಸಂಭವಿಸಿಲ್ಲ, ಅವರು ಕಾಯಿಲೆಯಿಂದ ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ. 


ಫುಡ್ ಪಾಯಿಸನ್ ಬಗ್ಗೆ ದೂರುಗಳನ್ನು ಪಡೆದ ನಂತರ ಪ್ರಯಾಣಿಕರಿಗೆ ನೀಡಲಾಗಿದ್ದ ಆಹಾರವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.