ಮೈನ್ಪುರ: ಉತ್ತರಪ್ರದೇಶದ ಈ ಗ್ರಾಮಕ್ಕೆ ಭೇಟಿ ನೀಡಿದ ಯಾರೇ ಆಗಲಿ, ಅಲ್ಲಿನ ಮಕ್ಕಳು ಮತ್ತು ಮಹಿಳೆಯರನ್ನು ಕಂಡರೆ ನಿಜಕ್ಕೂ ಮನಸ್ಸಿಗೆ ನೋವಾಗದೇ ಇರದು. ಹಣೆಯಲ್ಲಿ ಕುಂಕುಮವಿಲ್ಲದೆ ಸಿಂಗಾರ ಮಾಡಿಕೊಳ್ಳದ ಮಹಿಳೆಯರು ಮತ್ತು ಹಸಿವಿನಿಂದ ಬಳಲುತ್ತಿರುವ ಮಕ್ಕಳನ್ನು ಕಂಡರೆ ಕರುಳು ಚುರುಕ್ ಎನ್ನದೇ ಇರದು!


COMMERCIAL BREAK
SCROLL TO CONTINUE READING

ಉತ್ತರಪ್ರದೇಶದ ಪುಸೈನಾ ಗ್ರಾಮದ ಮಹಿಳೆಯರ ಮೇಲೆ ಯಾರ ಶಾಪವೋ ಏನೋ ತಿಳಿಯದು. ಈ ಗ್ರಾಮದ ಶೇ.50ಕ್ಕೂ ಅಧಿಕ ಮಹಿಳೆಯರು ಗಂಡನನ್ನು ಕಳೆದುಕೊಂಡು ವಿಧವೆಯರಾಗಿದ್ದಾರೆ. ಅವರ ಸ್ಥಿತಿ ಹೇಳತೀರದಾಗಿದೆ. ಪುಸೈನಾ ಗ್ರಾಮದಲ್ಲಿ ಸುಮಾರು 300 ಕುಟುಂಬಗಳಿದ್ದು 4,000ಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಈ ಕುಟುಂಬಗಳಲ್ಲಿ 160 ಕುಟುಂಬಗಳ ಮಹಿಳೆಯರು ವಿಧವೆಯರಾಗಿದ್ದಾರೆ. ಇದಕ್ಕೆ ಕಾರಣ ಕಚ್ಚಾ ಮದ್ಯ!!!


ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ಮಾರಾಟವಾಗುವ ಸಾರಾಯಿ ಕುಡಿದು ಅನಾರೋಗ್ಯದಿಂದಾಗಿ ಪುರುಷರು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಈ ಗ್ರಾಮದಲ್ಲಿ 25 ವರ್ಷದಿಂದ 65 ವರ್ಷದವರೆಗಿನ ಮಹಿಳೆಯರು ವಿಧವೆಯರಾಗಿ ಜೀವನ ಕಳೆಯುವಂತಾಗಿದೆ. ಕಳೆದ 14 ವರ್ಷಗಳಿಂದ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು, ಪತಿಯನ್ನು ಕಳೆದುಕೊಂಡ ಮಹಿಳೆಯರ ಮೇಲೆ ಮನೆಯ ಸಂಪೂರ್ಣ ಜವಾಬ್ದಾರಿ ಬಿದ್ದಿದೆ. ಹೀಗಾಗಿ ಮನೆಯ ನಿರ್ವಹಣೆ ಕಷ್ಟವಾಗಿದ್ದು, ಮಕ್ಕಳು, ಮಹಿಳೆಯರು ಹಸಿವಿನಿಂದ ಬಳಲುವಂತಾಗಿದೆ.  


ಅಕ್ರಮ ಮದ್ಯ ಮಾರಾಟದ ಬಗ್ಗೆ ಇತರರೊಂದಿಗೆ ಚರ್ಚಿಸುವುದಾಗಲೀ, ಹೊರಗಿನವರಿಗೆ ದೂರು ನೀಡಲು ಯಾರೇ ಪ್ರಯತ್ನಿಸಿದರೂ, ಮುಂದಿನ ಪರಿಸ್ಥಿತಿಯನ್ನು ಅವರೇ ಎದುರಿಸಬೇಕಾದ ಸನ್ನಿವೇಶ ಗ್ರಾಮದಲ್ಲಿ ನಿರ್ಮಾಣವಾಗಿದೆ. ಕಳೆದ 14-15 ವರ್ಷಗಳ ಹಿಂದೆ ಗ್ರಾಮದಲ್ಲಿ ಆರಂಭವಾದ ಅಕ್ರಮ ಮದ್ಯ ಮಾರಾಟ ಪೋಲೀಸರ ದಾಳಿಯಿಂದಾಗಿ ಹಲವು ಬಾರಿ ಸ್ಥಗಿತಗೊಂಡಿತ್ತು. ಆದರೆ ಇದೀಗ ಮತ್ತೆ ಮದ್ಯ ಮಾಫಿಯಾ ಆರಂಭವಾಗಿದೆ. ಇನ್ನಾದರೂ ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಹಾಗೇ ಇಲ್ಲಿನ ವಿಧವಾ ಮಹಿಳೆಯರ ಜೀವನೋಪಾಯಕ್ಕಾಗಿ ಆರ್ಥಿಕ ನೆರವು ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.