ನವದೆಹಲಿ: ನೀವೇನಾದರೂ ರೈಲ್ವೆ ಇಲಾಖೆಯಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಇರಾದೆ ಹೊಂದಿದ್ದರೆ ನಿಮಗಿದು ಸುವರ್ಣಾವಕಾಶ. ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು ಖಾಲಿ ಇರುವ ಒಂದು ಲಕ್ಷಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ಮೂಲಕ ಅಭ್ಯರ್ಥಿಗಳನ್ನು ನೇಮಕ ಮಾಡಲು ನಿರ್ಧರಿಸಿದೆ. ಈ ಸಂಬಂಧ ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸುವುದಾಗಿ ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ. 


COMMERCIAL BREAK
SCROLL TO CONTINUE READING

ಈಗಾಗಲೇ ಭಾರತೀಯ ರೈಲ್ವೆಯ ಎಲ್ಲಾ ವಲಯಗಳಿಗೆ ಖಾಲಿ ಇರುವ ಹುದ್ದೆಗಳ ವಿವರ ಸಲ್ಲಿಸುವಂತೆ ರೈಲ್ವೆ ನೇಮಕಾತಿ ಮಂಡಳಿ ಸೂಚನೆ ನೀಡಿದೆ. ಅದರಂತೆ ಪೂರ್ವ ರೈಲ್ವೆಯಲ್ಲಿ 3000 ಹುದ್ದೆಗಳು ಖಾಲಿ ಇದ್ದು, ಈಗಾಗಲೇ 6 ಸಾವಿರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ ಎನ್ನಲಾಗಿದೆ.


ಎರಡು ವಿಭಾಗಗಳಲ್ಲಿ ಹುದ್ದೆಗಳ ವಿವರ
ಪ್ರತಿಯೊಂದು ರೈಲ್ವೆ ವಲಯವು ಎರಡು ವಿಭಾಗಗಳಲ್ಲಿ ಹುದ್ದೆಗಳ ವಿವರ ನೀಡಲು ರೈಲ್ವೆ ನೇಮಕಾತಿ ಮಂಡಳಿ ಸೂಚಿಸಿದೆ. ಅದರಂತೆ ಜವವರಿ 1, 2019ರ ವರೆಗಿನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಹಾಗೂ ಮಾರ್ಚ್ 31, 2021ರ ವರೆಗೆ ಎರಡು ವರ್ಷಗಳಲ್ಲಿ ಖಾಲಿ ಆಗಲಿರುವ ಹುದ್ದೆಗಳ ಒಟ್ಟು ವಿವರಗಳನ್ನು ನೀಡುವಂತೆ ಸೂಚಿಸಿದೆ. ಅಷ್ಟೇ ಅಲ್ಲದೆ, ಕಾರ್ಯದೊತ್ತಡ ಇರುವ ಹುದ್ದೆಗಳ ವಿವರಗಳನ್ನೂ ಸಲ್ಲಿಸುವಂತೆ ಮಂಡಳಿ ಹೇಳಿದೆ. 


ಫೆಬ್ರವರಿ 14ರೊಳಗೆ ವಿವರ ಸಲ್ಲಿಕೆ
ರೈಲ್ವೆ ನೇಮಕಾತಿ ಮಂಡಳಿ ಸೂಚನೆಯಂತೆ ಎಲ್ಲಾ ವಲಯಗಳೂ ಖಾಲಿ ಇರುವ ಹುದ್ದೆಗಳ ವಿವರವನ್ನು ಫೆಬ್ರವರಿ 14ರೊಳಗೆ ಸಲ್ಲಿಸಲಿವೆ. ಬಳಿಕ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಮೊದಲ ಹಂತದಲ್ಲಿ ತಾಂತ್ರಿಕೇತರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಬಗ್ಗೆ ರೈಲ್ವೆ ಇಲಾಖೆ ಶೀಘ್ರದಲ್ಲಿಯೇ ಅಧಿಕೃತ ಪ್ರಕಟಣೆ ಹೊರಡಿಸಲಿದೆ.