ಎರಿಕ್‌ಸನ್ ಕಂಪನಿಗೆ 550 ಕೋಟಿ ರೂ. ಪಾವತಿಸಿದ ಅನಿಲ್ ಅಂಬಾನಿ ಬೆನ್ನಿಂದೆ ಯಾರಿದ್ದಾರೆ ಗೊತ್ತಾ?
ಸುಪ್ರೀಂ ಕೋರ್ಟ್ ಗಡುವು ಮುಗಿಯುವ ಒಂದು ದಿನ ಮೊದಲೇ ಸ್ವೀಡನ್ ಮೂಲದ ಎರಿಕ್‌ಸನ್ ಕಂಪನಿಗೆ ಪಾವತಿಸಬೇಕಿದ್ದ 550 ಕೋಟಿ ರೂ.ಗಳ ಸಂಪೂರ್ಣ ಸಾಲವನ್ನು ಅನಿಲ್ ಅಂಬಾನಿ ಪಾವತಿಸಿದ್ದಾರೆ.
ನವದೆಹಲಿ: ಸುಪ್ರೀಂ ಕೋರ್ಟ್ ಗಡುವು ಮುಗಿಯುವ ಒಂದು ದಿನ ಮೊದಲೇ ಸ್ವೀಡನ್ ಮೂಲದ ಎರಿಕ್‌ಸನ್ ಕಂಪನಿಗೆ ಪಾವತಿಸಬೇಕಿದ್ದ 550 ಕೋಟಿ ರೂ.ಗಳ ಸಂಪೂರ್ಣ ಸಾಲವನ್ನು ಅನಿಲ್ ಧೀರೂಭಾಯಿ ಅಂಬಾನಿ ಸಮೂಹದ (ADAG) ಮುಖ್ಯಸ್ಥ ಅನಿಲ್ ಅಂಬಾನಿ ಪಾವತಿಸಿದ್ದಾರೆ.
ಸ್ವೀಡನ್ ಮೂಲದ ದೂರ ಸಂಪರ್ಕ ಉಪಕರಣ ತಯಾರಿಕಾ ಸಂಸ್ಥೆ ಎರಿಕ್‌ಸನ್ ಕಂಪನಿಗೆ ಅನಿಲ್ ಅಂಬಾನಿ 550 ಕೋಟಿ ರೂ. ಹಣ ನೀಡದಿರುವ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನಾಲ್ಕು ವಾರಗಳೊಳಗೆ ಎರಿಕ್‌ಸನ್ ಕಂಪನಿಗೆ 453 ಕೋಟಿ ರೂ. ಪಾವತಿಸಿ ಇಲ್ಲವೇ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಿ ಎಂದು 2019ರ ಫೆ.20 ರಂದು ಅನಿಲ್ ಅಂಬಾನಿಗೆ ಖಡಕ್ ಆದೇಶ ನೀಡಿತ್ತು.
ಈ ಹಿನ್ನೆಲೆಯಲ್ಲಿ ಸ್ವೀಡನ್‌ನ ಟೆಲಿಕಾಂ ಉಪಕರಣಗಳ ಉತ್ಪಾದನಾ ಕಂಪೆನಿ ಎರಿಕ್‌ಸನ್‌ಗೆ ರಿಲಾಯನ್ಸ್ ಕಮ್ಯೂನಿಕೇಶನ್ ಪಾವತಿಸಬೇಕಿದ್ದ 462 ಕೋಟಿ ರೂ. ಹಾಗೂ ಬಡ್ಡಿ ಸೇರಿದಂತೆ ಸುಮಾರು 550 ಕೋಟಿ ರೂ. ಪಾವತಿಸಿದೆ.
ಅಷ್ಟಕ್ಕೂ, ಸುಪ್ರೀಂಕೋರ್ಟ್ ಆದೇಶದಂತೆ ನಾಲ್ಕು ವಾರದೊಳಗೆ ಎರಿಕ್‌ಸನ್ ಕಂಪನಿಗೆ 550 ಕೋಟಿ ರೂ. ಪಾವತಿಸಿದ ಅನಿಲ್ ಅಂಬಾನಿ ಬೆನ್ನಿಂದೆ ಇರುವುದು ಮತ್ತಾರೂ ಅಲ್ಲ, ಅವರ ಸಹೋದರ ಮುಕೇಶ್ ಅಂಬಾನಿ ಮತ್ತು ಅತ್ತಿಗೆ ನೀತಾ ಅಂಬಾನಿ.
ಅಣ್ಣ-ಆತ್ತಿಗೆ ಈ ಸಹಾಯಕ್ಕಾಗಿ ಅನಿಲ್ ಅಂಬಾನಿ ಕೃತಜ್ಞತೆ ಸಲ್ಲಿಸಿದ್ದು, "ನನ್ನ ಗೌರವಾನ್ವಿತ ಅಣ್ಣ ಮುಕೇಶ್ ಮತ್ತು ಅತ್ತಿಗೆ ನೀತಾ ಅವರಿಗೆ ನನ್ನ ಪ್ರಾಮಾಣಿಕ ಮತ್ತು ಹೃತ್ಪೂರ್ವಕ ಧನ್ಯವಾದಗಳು. ನನ್ನ ಕಷ್ಟದ ಸಮಯದಲ್ಲಿ ನನಗೆ ಬೆನ್ನೆಲುಬಾಗಿ ನಿಂತು, ನಮ್ಮ ನಡುವಿನ ಬಲಿಷ್ಠ ಕೌಟುಂಬಿಕ ಬಾಂಧವ್ಯವನ್ನು ಮತ್ತೊಮ್ಮೆ ಎತ್ತಿ ಹಿಡಿದು, ನನಗೆ ಸಕಾಲಕ್ಕೆ ನೆರವಿಗೆ ಬಂದ ಅವರಿಗೆ ನಾನು ಚಿರಋಣಿ. ಈ ಹಿಂದೆಯೂ ನನ್ನ ಕಷ್ಟದಲ್ಲಿ ಮುಕೇಶ್ ನೆರವಾಗಿದ್ದಾರೆ. ಅವರ ಹೃದಯ ವೈಶಾಲ್ಯತೆಗೆ ನನ್ನ ಮನ ತುಂಬಿ ಬಂದಿದೆ" ಎಂದು ತಿಳಿಸಿರುವುದಾಗಿ ಕಂಪನಿಯ ವಕ್ತಾರರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಹೇಳಲಾಗಿದೆ.