ವಿಶ್ವದ ನಾಲ್ಕನೇ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರಿಸ್ ಮಾಲೀಕ Mukesh Ambani
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ (Mukesh Ambani) ಇದೀಗ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ (Mukesh Ambani) ಇದೀಗ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಆಸ್ತಿ 80.6 ಬಿಲಿಯನ್ ಡಾಲರ್ ಗೆ ತಲುಪಿದೆ. ಈ ವರ್ಷ, ಅವರ ಸಂಪತ್ತಿನಲ್ಲಿ ಒಟ್ಟು 22 ಬಿಲಿಯನ್ ಡಾಲರ್ ಏರಿಕೆಯಾಗಿದೆ. ಆಸ್ತಿಯ ವಿಷಯದಲ್ಲಿ ಅಂಬಾನಿ ಫ್ರಾನ್ಸ್‌ನ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿದ್ದಾರೆ.
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಕೆಲವೇ ವಾರಗಳಲ್ಲಿ ವಿಶ್ವದ ಅನೇಕ ಶ್ರೀಮಂತ ಉದ್ಯಮಿಗಳನ್ನು ಹಿಂದಿಕ್ಕಿದ್ದಾರೆ. ಇದೀಗ ಅವರು ಮತ್ತೊಂದುಜಿಗಿತ ಸಾಧಿಸಿದ್ದಾರೆ. ಇದಕ್ಕೂ ಮೊದಲು, ಅಂಬಾನಿ ಸ್ಪೇಸ್‌ಎಕ್ಸ್‌ನ ಎಲೋನ್ ಮಸ್ಕ್, ಪ್ರಸಿದ್ಧ ಹೂಡಿಕೆದಾರ ವಾರೆನ್ ಬಫೆಟ್, ಆಲ್ಫಾಬೆಟ್ ಇಂಕ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಮತ್ತು ಫೇಸ್‌ಬುಕ್‌ನ ಲ್ಯಾರಿ ಪೇಜ್ ಅನ್ನು ಹಿಂದಿಕ್ಕಿದ್ದಾರೆ.
ಕರೋನಾ ಮಹಾಮಾರಿಯ ಸಮಯದಲ್ಲಿ ತೈಲ ಬೇಡಿಕೆ ಕುಸಿಯುತ್ತಿರುವ ಕಾರಣ ರಿಲಯನ್ಸ್ ಗ್ರೂಪ್ ಹಿನ್ನಡೆ ಅನುಭವಿಸಿತ್ತು. ಆದರೆ, ಕಂಪನಿಯ ಷೇರುಗಳ ಬೆಲೆ ಮಾರ್ಚ್ ನ ಕನಿಷ್ಠ ಮಟ್ಟಕ್ಕಿಂತ ಎರಡು ಪಟ್ಟು ಹೆಚ್ಚಾಗಿವೆ. ರಿಲಯನ್ಸ್ ಸಮೂಹಕ್ಕೆ ಸೇರಿರುವ ಟೆಲಿಕಾಂ ಕಂಪನಿ ಜಿಯೋದಲ್ಲಿ ಹರಿದುಬಂದಿರುವ ಶತಕೋಟಿ ಡಾಲರ್ ಹೂಡಿಕೆಯಿಂದಾಗಿ ಸಮೂಹ ಸಾಕಷ್ಟು ಲಾಭವನ್ನು ಗಳಿಸಿದೆ.
ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಅಮೆಜಾನ್‌ನ ಮಾಲೀಕರು ಮತ್ತು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಒಟ್ಟು 187 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ. ಈ ವರ್ಷ, ಅವರ ಸಂಪತ್ತು 72.1 ಬಿಲಿಯನ್ ಡಾಲರ್ ಗಳಷ್ಟು ಹೆಚ್ಚಾಗಿದೆ. ಮೈಕ್ರೋಸಾಫ್ಟ್ನ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಆಸ್ತಿ 121 ಬಿಲಿಯನ್ ಡಾಲರ್ ಇದೆ. ಈ ವರ್ಷ, ಅವರ ಸಂಪತ್ತು 7.5 ಬಿಲಿಯನ್ ಡಾಲರ್ ಗಳಷ್ಟು ಹೆಚ್ಚಾಗಿದೆ.
ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್ ಮೂರನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಆಸ್ತಿ 102 ಬಿಲಿಯನ್ ಡಾಲರ್ ಇದೆ ಎನ್ನಲಾಗಿದೆ. ಈ ವರ್ಷ ಇಲ್ಲಿಯವರೆಗೆ, ಅವರ ಸಂಪತ್ತು 23 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಮಾರ್ಕ್ ಜುಕರ್‌ಬರ್ಗ್ ಇದೇ ಮೊದಲ ಬಾರಿಗೆ 100 ಬಿಲಿಯನ್ ಡಾಲರ್ ಕ್ಲಬ್‌ಗೆ ಸೇರ್ಪಡೆಯಾಗಿದ್ದಾರೆ.