ಮುಕುಲ್ ರಾಯ್ `ಮೇಡ್ ಇನ್ ಚೀನಾ ಚಾಣಕ್ಯ`- ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ
ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಭಾನುವಾರ ಬಿಜೆಪಿ ಮುಖಂಡ ಮುಕುಲ್ ರಾಯ್ ಅವರ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.
ನವದೆಹಲಿ: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಭಾನುವಾರ ಬಿಜೆಪಿ ಮುಖಂಡ ಮುಕುಲ್ ರಾಯ್ ಅವರ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.
ಪಶ್ಚಿಮ ಬಂಗಾಳದ 107 ಶಾಸಕರು ಶೀಘ್ರದಲ್ಲೇ ಬಿಜೆಪಿಗೆ ಸೇರಲಿದ್ದಾರೆ ಎಂಬ ರಾಯ್ ಅವರ ಹೇಳಿಕೆ ಆಧಾರ ರಹಿತವಾಗಿದೆ ಎಂದು ಹೇಳಿದ ಅವರು ರಾಯ್‌ಗೆ ಇತರ ಪಕ್ಷಗಳತ್ತ ನೋಡುವುದನ್ನು ನಿಲ್ಲಿಸಿ, ತಮ್ಮ ಕ್ಷೇತ್ರದ ಕೌನ್ಸಿಲರ್‌ಗಳತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದರು. ರಾಯ್ ತಮ್ಮ ಕ್ಷೇತ್ರವನ್ನು ನಿಭಾಯಿಸಲು ಅಸಮರ್ಥರಾಗಿದ್ದಾರೆ ಮತ್ತು ನಂತರ ಇತರ ರಾಜಕೀಯ ಪಕ್ಷಗಳ ಶಾಸಕರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಬಗ್ಗೆ ಮಾತನಾಡುತ್ತಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಹೇಳಿದರು.
ರಾಯ್ ಅವರು ತಮ್ಮ ಕ್ಷೇತ್ರದ 10 ಕೌನ್ಸಿಲರ್‌ಗಳನ್ನು ಬಿಜೆಪಿ ತೊರೆಯುವುದನ್ನು ತಡೆಯಲು ವಿಫಲರಾಗಿದ್ದಾರೆ ಎನ್ನುವ ವಿಚಾರಕ್ಕೆ ನಾಚಿಕೆ ಪಡಬೇಕು ಎಂದು ಬ್ಯಾನರ್ಜಿ ಹೇಳಿದರು. ಇನ್ನು ಮುಂದುವರೆದು ರಾಯ್ ಅವರನ್ನು 'ಮೇಡ್ ಇನ್ ಚೀನಾ ಚಾಣಕ್ಯ' ಎಂದು ಕರೆದ ಅಭಿಷೇಕ್ ಬ್ಯಾನರ್ಜಿ, ತಮ್ಮದೇ ಕೌನ್ಸಿಲರ್‌ಗಳನ್ನು ಬಿಜೆಪಿಯನ್ನು ತೊರೆಯುತ್ತಿರುವುದನ್ನು ತಡೆಯಲು ಸಾಧ್ಯವಾಗದಿದ್ದಾಗ, ಟಿಎಂಸಿ ಮತ್ತು ಇತರ ಪಕ್ಷಗಳಿಂದ 107 ಶಾಸಕರನ್ನು ಬಿಜೆಪಿಯ ಮಡಿಲಿಗೆ ಅವರು ಹೇಗೆ ತರುತ್ತಾರೆ ಎಂದು ರಾಯ್ ಯೋಚಿಸಬೇಕು ಎಂದು ಹೇಳಿದರು.
ಕಮ್ಯುನಿಸ್ಟ್ ಪಾರ್ಟಿ (ಮಾರ್ಕ್ಸ್‌ವಾದಿ) (ಸಿಪಿಎಂ), ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಸೇರಿದ ಪಶ್ಚಿಮ ಬಂಗಾಳದ 107 ಶಾಸಕರು ಶೀಘ್ರದಲ್ಲೇ ಬಿಜೆಪಿಗೆ ಸೇರಲಿದ್ದಾರೆ ಎಂದು ರಾಯ್ ಶನಿವಾರ ಹೇಳಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಈಗ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಹೇಳಿಕೆ ಬಂದಿದೆ.