ಲಕ್ನೋ: ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಉತ್ತರ ಪ್ರದೇಶದ  ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷದ ಮಾಜಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಮೋದಿ ಸರ್ಕಾರದ ಆಡಳಿತದಲ್ಲಿ ಕೋಮು ಹಿಂಸಾಚಾರ ಹೆಚ್ಚಾಗಿದೆ ಎಂದು ಎಂದು ಅವರು ಹೇಳಿದರು. ಜೊತೆಗೆ ಉತ್ತರ ಪ್ರದೇಶವು ಕಾನೂನು ಮತ್ತು ಸುವ್ಯವಸ್ಥೆಯಿಂದ ಕೂಡಿಲ್ಲ ಎಂದು ದೂರಿದರು. 


COMMERCIAL BREAK
SCROLL TO CONTINUE READING

ಸಮಾಜವಾದಿ ಪಕ್ಷದಿಂದ ಪ್ರತ್ಯೇಕಗೊಂಡ ಬಳಿಕ ತನಗೆ ಯಾವುದೇ ಹೊಸ ಪಕ್ಷವನ್ನು ರಚಿಸುವ ಆಲೋಚನೆ ಇಲ್ಲ ಎಂದು ತಿಳಿಸಿದ ಮುಲಾಯಂ ಸಿಂಗ್ ಯಾದವ್,  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 


"ಬನಾರಸ್ ಹಿಂದೂ ವಿಶ್ವ ವಿದ್ಯಾನಿಲಯದಲ್ಲಿ ಹುಡುಗಿಯರು ಸುರಕ್ಷಿತವಾಗಿಲ್ಲ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯಿಂದ ಕೂಡಿಲ್ಲ. ಯೋಗಿ ಸರ್ಕಾರ ತನ್ನ ಯಾವುದೇ ಭರವಸೆಗಳನ್ನು ಪೂರೈಸುತ್ತಿಲ್ಲ" ಎಂದು ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ತಿಳಿಸಿದರು.


ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಕ್ಯಾಂಪಸ್ ಒಳಗೆ ಹಿಂಸಾಚಾರ ಸ್ಪೋಟದ ನಂತರ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಲವು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಸಾವಿರಾರು ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು. 


ಹಳೆಯ ಸಾವಿರ ಮತ್ತು ಐನೂರು ನೋಟುಗಳ ಅಮಾನೀಕರಣದ ಬಗ್ಗೆ ಮಾತನಾಡಿದ ಅವರು, "ಜನಸಾಮಾನ್ಯರಿಗೆ ಇದರಿಂದಾಗಿ ಹಿನ್ನಡೆ ಉಂಟಾಗಿದೆ.  ಇದರಿಂದಾಗಿ ಜನರು ತಾವು ಶ್ರಮಿಸಿದ ಹಣವನ್ನು ನೀಡಬೇಕಾಯಿತು" ಎಂದು ತಿಳಿಸಿದರು.


"ನಾನು ಜನರಿಗೆ ಉದ್ಯೋಗಾವಕಾಶ ನೀಡಿದ್ದೆ, ಆದರೆ ಇದೀಗ ಉದ್ಯೋಗ ಸೃಷ್ಟಿಗೆ ಏನಾಗುತ್ತಿದೆ" ಎಂದು ಪ್ರಶ್ನಿಸಿದ್ದಾರೆ. 


"ಹಳ್ಳಿಯನ್ನು ಬಿಡಿ, ಲಕ್ನೋ ನಗರವೂ ಸಹ ನಿರಂತರ ವಿದ್ಯುತ್ ಸರಬರಾಜುವನ್ನು ಪಡೆಯುತ್ತಿಲ್ಲ" ಎಂದು ಹಿರಿಯ ರಾಜಕೀಯ ನಾಯಕ ಹೇಳಿದರು.


ಇದೇ ಸಂದರ್ಭದಲ್ಲಿ ಮಾತನಾಡಿದ ಅವರು "ತಂದೆಯಾಗಿ ಅಖಿಲೇಶ್ ಅವರಿಗೆ ನನ್ನ ಆಶೀರ್ವಾದ ಯಾವಾಗಲೂ ಇರುತ್ತದೆ. ಆದರೆ ನಾನು ಅವರ ನಿರ್ಧಾರಗಳನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.