ಮುಂಬೈ ಮಳೆ: ಶಾಲಾ-ಕಾಲೇಜುಗಳಿಗೆ ರಜೆ!
ಮುಂಬೈ ಭಾರೀ ಮಳೆಯಿಂದಾಗಿ ಭಾನುವಾರ ಜನಜೀವನ ಅಸ್ತವ್ಯಸ್ತವಾಗಿತ್ತು. ಇದರ ಬೆನ್ನಲ್ಲೇ ಸೋಮವಾರ ಮತ್ತು ಮಂಗಳವಾರ ಮುಂಬೈನಲ್ಲಿ ತೀವ್ರ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಮುಂಬೈ: ಮುಂಬೈ ಭಾರೀ ಮಳೆಯಿಂದಾಗಿ ಭಾನುವಾರ ಜನಜೀವನ ಅಸ್ತವ್ಯಸ್ತವಾಗಿತ್ತು. ಇದರ ಬೆನ್ನಲ್ಲೇ ಸೋಮವಾರ ಮತ್ತು ಮಂಗಳವಾರ ಮುಂಬೈನಲ್ಲಿ ತೀವ್ರ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮುಂದಿನ 24 ಗಂಟೆಗಳ ಕಾಲ ಮುಂಬೈ ನಗರ ಮತ್ತು ಉಪನಗರಗಳಲ್ಲಿ ಹಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿಯ ಹವಾಮಾನ ಬುಲೆಟಿನ್ ಹೇಳಿದೆ.
ಮುಂಬೈ, ಅದರ ಉಪನಗರಗಳಾದ ಪಾಲ್ಘರ್, ಥಾಣೆ ಮತ್ತು ರಾಯಗಡ್ನಲ್ಲಿನ ಖಾಸಗಿ ಮತ್ತು ಸಾರ್ವಜನಿಕ ಶಾಲೆಗಳು ಸೋಮವಾರ ಮುಚ್ಚಲ್ಪಟ್ಟಿವೆ ಮತ್ತು ಜನರು ಅಗತ್ಯವಿದ್ದರೆ ಮಾತ್ರ ಹೊರಹೋಗುವಂತೆ ಕೇಳಿಕೊಳ್ಳಲಾಗಿದೆ. ಅಗತ್ಯ ಸೇವೆಗಳನ್ನು ಒದಗಿಸುವ ಸರ್ಕಾರಿ ಕಚೇರಿಗಳಿಗೆ ಅಗತ್ಯವಿದ್ದರೆ ಮಾತ್ರ ತಡವಾಗಿ ಸೇವೆಗೆ ಹಾಜರಾಗಲು ತಿಳಿಸಲಾಗಿದೆ.
ಹಲವಾರು ಪ್ರದೇಶಗಳು ತೀವ್ರ ಜಲಾವೃತವಾಗಿರುವ ಪ್ರಕರಣಗಳು ಕಂಡುಬಂದವು. ನಲಸೋಪರಾ, ಸಂತಕ್ರೂಜ್, ವಾಸೈ, ವಿರಾರ್, ಸಿಯಾನ್, ಕುರ್ಲಾ, ಅಂಧೇರಿ, ಮಲಾಡ್ ಮತ್ತು ವಿಲೇ ಪಾರ್ಲೆ ಮುಂತಾದ ಪ್ರದೇಶಗಳಲ್ಲಿ ಮುಂಗಾಲಿನವರೆಗೆ ನೀರು ತುಂಬಿರುವ ಬಗ್ಗೆ ವರದಿಯಾಗಿದೆ. ಸ್ಥಳೀಯ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದ್ದು, ಭಾನುವಾರ ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಿಂದ ಒಳಬರುವ ಅನೇಕ ರೈಲುಗಳನ್ನು ರದ್ದುಗೊಳಿಸಲಾಯಿತು. ಅಲ್ಲದೆ ಕೆಲವು ರೈಲುಗಳ ಮಾರ್ಗ ಬದಲಿಸಲಾಗಿದೆ. ಸೋಮವಾರ ಕೂಡ ಹಲವಾರು ರೈಲುಗಳನ್ನು ರದ್ದುಪಡಿಸಲಾಗಿದೆ.
ಭಾರೀ ಮಳೆಯಿಂದಾಗಿ ರೈಲು ಹಳಿಗಳ ಮೇಲೆ ನೀರು ತುಂಬಿರುವುದರಿಂದ ರೈಲುಗಳನ್ನು ರದ್ದುಗೊಳಿಸುವುದಾಗಿ ಕೇಂದ್ರ ರೈಲ್ವೆ ಘೋಷಿಸಿದ್ದು, ನೂರಾರು ಪ್ರಯಾಣಿಕರು ಲೋಕಮಾನ್ಯ ತಿಲಕ್ ಟರ್ಮಿನಸ್ (ಎಲ್‌ಟಿಟಿ) ರೈಲ್ವೆ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.