ಪಂಜಾಬ್: ಮುಖ್ಯಮಂತ್ರಿಗೆ ರಾಜೀನಾಮೆ ರವಾನಿಸಿದ ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು ಈ ಹಿಂದೆ ಅಮರೀಂದರ್ ಸಿಂಗ್ ಬದಲಿಗೆ ರಾಹುಲ್ ಗಾಂಧಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು.
ನವದೆಹಲಿ: ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಸಂಪುಟದಿಂದ ನಿರ್ಗಮಿಸುವ ಘೋಷಣೆಯ ನಂತರ ಉಂಟಾಗಿದ್ದ ಊಹಾಪೋಹಗಳಿಗೆ ತೆರೆ ಎಳೆದಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಸೋಮವಾರ ತಮ್ಮ ರಾಜೀನಾಮೆ ನೀಡಿದ್ದಾರೆ.
"ಇಂದು ನಾನು ನನ್ನ ರಾಜೀನಾಮೆಯನ್ನು ಪಂಜಾಬ್ ಮುಖ್ಯಮಂತ್ರಿಯವರ ಅಧಿಕೃತ ನಿವಾಸಕ್ಕೆ ತಲುಪಿಸಿದ್ದೇನೆ" ಎಂದು ಸಿಧು ಟ್ವಿಟ್ಟರ್ನಲ್ಲಿ ಬರೆದಿದ್ದಾರೆ. ಕ್ರಿಕೆಟಿಗ ಮತ್ತು ರಾಜಕಾರಣಿ ಈ ಹಿಂದೆ ಅಮರೀಂದರ್ ಸಿಂಗ್ ಬದಲಿಗೆ ರಾಹುಲ್ ಗಾಂಧಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು.
ಕಳೆದ ಒಂದು ತಿಂಗಳಿಂದ ನವಜೋತ್ ಸಿಂಗ್ ಸಿಧು ರಾಜೀನಾಮೆಯನ್ನು ಅಮರಿಂದರ್ ಸಿಂಗ್‌ಗೆ ಏಕೆ ಕಳುಹಿಸಲಾಗಿಲ್ಲ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕಳೆದ ವರ್ಷ ಇಮ್ರಾನ್ ಖಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗಿನಿಂದ ಸಿಂಗ್ ಮತ್ತು ಸಿಧು ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಸಿಧು ಮತ್ತು ಅವರ ಪತ್ನಿಗೆ ಚಂಡೀಗಢ ಅಥವಾ ಅಮೃತಸರದಿಂದ ಟಿಕೆಟ್ ನಿರಾಕರಿಸುವಲ್ಲಿ ಅಮರಿಂದರ್ ಸಿಂಗ್ ಕೈವಾಡವಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಬಿರುಕು ಮತ್ತಷ್ಟು ಹೆಚ್ಚಾಯಿತು.
ಪಂಜಾಬ್ ರಾಜ್ಯದ 13 ಲೋಕಸಭಾ ಕ್ಷೇತ್ರಗಳಲ್ಲಿ ಎಂಟು ಸಂಸದೀಯ ಸ್ಥಾನಗಳನ್ನು ಪಕ್ಷ ಗೆದ್ದ ನಂತರ ಜೂನ್ 6 ರಂದು ನಡೆದ ಕ್ಯಾಬಿನೆಟ್ ಪುನರ್ರಚನೆಯಲ್ಲಿ ಮುಖ್ಯಮಂತ್ರಿಗಳು ಕಾಂಗ್ರೆಸ್ ನಾಯಕನನ್ನು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯದ ಖಾತೆಯಿಂದ ತೆಗೆದುಹಾಕಿದರು.