ಅಮೃತಸರ ರೈಲು ದುರಂತಕ್ಕೆ ಜನರ ನಿರ್ಲಕ್ಷ್ಯವೇ ಕಾರಣ: ವರದಿ
ಪಂಜಾಬ್ನ ಅಮೃತಸರದ ಚೌರಾ ಬಜಾರ್ ಬಳಿ ನಡೆಯುತ್ತಿದ್ದ ದಸರಾ ಮೇಳದಲ್ಲಿ ಪಾಲ್ಗೊಂಡಿದ್ದ ಜನರ ನಿರ್ಲಕ್ಷ್ಯವೇ ಭೀಕರ ದುರಂತಕ್ಕೆ ಮುಖ್ಯ ಕಾರಣ ಎಂದು ರೈಲ್ವೆ ಸುರಕ್ಷತೆ ಮುಖ್ಯ ಆಯುಕ್ತ ಎಸ್.ಕೆ.ಪಾಠಕ್ ತಿಳಿಸಿದ್ದಾರೆ.
ನವದೆಹಲಿ: ಅಮೃತಸರದಲ್ಲಿ ದಸರಾ ಹಬ್ಬದಂದು ನಡೆದಿದ್ದ ಭೀಕರ ರೈಲು ದುರಂತ ಸಂಭವಿಸಲು ಜನರ ನಿರ್ಲಕ್ಷ್ಯವೇ ಕಾರಣ ಎಂದು ರೈಲ್ವೆ ಇಲಾಖೆ ಗುರುವಾರ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.
ಅಕ್ಟೋಬರ್ 19ರಂದು ಪಂಜಾಬ್ನ ಅಮೃತಸರದ ಚೌರಾ ಬಜಾರ್ ಬಳಿ ನಡೆಯುತ್ತಿದ್ದ ದಸರಾ ಮೇಳದಲ್ಲಿ ಪಾಲ್ಗೊಂಡಿದ್ದ ಜನರ ನಿರ್ಲಕ್ಷ್ಯವೇ ಭೀಕರ ದುರಂತಕ್ಕೆ ಮುಖ್ಯ ಕಾರಣವಾಗಿದೆ ಎಂದು ರೈಲ್ವೆ ಸುರಕ್ಷತೆ ಮುಖ್ಯ ಆಯುಕ್ತ ಎಸ್.ಕೆ.ಪಾಠಕ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಈ ಘಟನೆ ಸಂದರ್ಭದಲ್ಲಿ ಜನರು ಉತ್ಸವ ನೋಡುವುದರಲ್ಲಿ ತಲ್ಲೀನರಾಗಿ ರೈಲ್ವೆ ಹಳಿಗಳ ಮೇಲೆ ನಿಂತಿದ್ದರು. ರೈಲು ಬರುವ ಸೂಚನೆ ಇದ್ದರೂ ಅದನ್ನು ಕಡೆಗಣಿಸಿದ್ದರು. ಈ ಸಂದರ್ಭದಲ್ಲಿ ರೈಲು ಬಂದುದೇ ಈ ದುರಂತಕ್ಕೆ ಮುಖ್ಯ ಕಾರಣ ಎಂದು ವರದಿಯಲ್ಲಿ ಹೇಳಿದ್ದಾರೆ.
ವಾಸ್ತವಿಕ ಮತ್ತು ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ ನಾನು ಈ ವರದಿ ನೀಡಿದ್ದು, ಜನರ ನಿರ್ಲಕ್ಷವೇ ದುರಂತಕ್ಕೆ ಕಾರಣ ಎಂದು ಪಾಠಕ್ ಅವರು ಹೇಳಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳುಹಿಸದಿರಲು ಕೆಲವು ಶಿಫಾರಸುಗಳನ್ನು ಮಾಡಿರುವುದಾಗಿ ತಿಳಿಸಿದ್ದಾರೆ.
ಅಕ್ಟೋಬರ್ 19ರಂದು ನಡೆದ ರೈಲು ದುರಂತದಲ್ಲಿ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈ ದುರ್ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.