ನವದೆಹಲಿ: ವಾಯುಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 25 ಕೋಟಿ ರೂ.ದಂಡ ವಿಧಿಸಿದೆ.


COMMERCIAL BREAK
SCROLL TO CONTINUE READING

ರಾಷ್ಟ್ರ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ವಾಯುಮಾಲಿನ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಎನ್​ಜಿಟಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜೊತೆ ಸೇರಿ ದೆಹಲಿ ಸರ್ಕಾರ 25 ಕೋಟಿ ರೂ. ದಂಡ ಪಾವತಿಸುವಂತೆ ಆದೇಶಿಸಿದೆ.


ಮಾಲಿನ್ಯ ಹೆಚ್ಚಾಗಲು ಕಾರಣರಾಗುತ್ತಿರುವವರಿಗೆ ಸೂಕ್ತ ದಂಡ ವಿಧಿಸಿ ಕ್ರಮ ಕೈಗೊಂಡಿದ್ದರೆ ಈ ಸಮಸ್ಯೆ ಇಷ್ಟು ಉಲ್ಬಣವಾಗುತ್ತಿರಲಿಲ್ಲ ಎಂದು ಆಕ್ಷೇಪಿಸಿರುವ ಎನ್​ಜಿಟಿ ಚೇರ್ಮನ್ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠ, ದೆಹಲಿ ಸರ್ಕಾರದ ಉದ್ಯೋಗಿಗಳು ಮತ್ತು ಮಾಲಿನ್ಯಕ್ಕೆ ಕಾರಣರಾಗುತ್ತಿರುವವರಿಂದ ಜುಲ್ಮಾನೆ ಮೊತ್ತವನ್ನು ಕಡಿತಗೊಳಿಸಿ, ಪಾವತಿಸುವಂತೆ  ಸೂಚಿಸಿದೆ. 


ಒಂದು ವೇಳೆ ದೆಹಲಿ ಸರ್ಕಾರ ಈ ದಂಡ ನೀಡಲು ವಿಫಲವಾದರೆ ಪ್ರತಿ ತಿಂಗಳು 10 ಕೋಟಿ ರೂಪಾಯಿ ಹೆಚ್ಚುವರಿ ದಂಡ ನೀಡಬೇಕೆಂದು ಎನ್​ಜಿಟಿ  ಹೇಳಿದೆ.