ನಿರ್ಭಯಾ ದೋಷಿಗಳಿಗೆ ಜ. 22ರ ಬದಲು ಮುಂದಿನ ತಿಂಗಳ ಈ ತಾರೀಖಿಗೆ ಗಲ್ಲುಶಿಕ್ಷೆ
NIRBHAYA CASE: ನಿರ್ಭಯಾ ಪ್ರಕರಣದಲ್ಲಿ ಅಪರಾಧಿಗಳ ಗಲ್ಲುಶಿಕ್ಷೆಗೆ ನೂತನ ಡೆತ್ ವಾರೆಂಟ್ ಜಾರಿಗೊಳಿಸಲು ತಿಹಾರ್ ಜೈಲು ಆಡಳಿತ ಮನವಿ ಮಾಡಿತ್ತು.
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಡಿಸೆಂಬರ್ 16, 2012ರಂದು ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ನಾಲ್ವರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ದೆಹಲಿ ನ್ಯಾಯಾಲಯ ಹೊಸ ಡೆತ್ ವಾರಂಟ್ ಜಾರಿಗೊಳಿಸಿದೆ. ಈ ಕುರಿತು ಹೊಸ ಡೆತ್ ವಾರೆಂಟ್ ಹೊರಡಿಸಿರುವ ದೆಹಲಿ ನ್ಯಾಯಾಲಯ ಈ ನಾಲ್ವರ ಗಲ್ಲುಶಿಕ್ಷೆಗೆ ಹೊಸ ದಿನಾಂಕ ನಿಗದಿಪಡಿಸಿದೆ. ಈ ಡೆತ್ ವಾರೆಂಟ್ ನಲ್ಲಿ ನಾಲ್ವರು ಆರೋಪಿಗಳಾಗಿರುವ ಮುಕೇಶ್ ಸಿಂಗ್(32), ವಿನಯ್ ಶರ್ಮಾ(26), ಅಕ್ಷಯ್ ಕುಮಾರ್ ಸಿಂಗ್(31) ಹಾಗೂ ಪವನ್ ಗುಪ್ತಾ(25) ಅವರುಗಳಿಗೆ ಜನವರಿ 22, 2020ರ ಬದಲಾಗಿ ಫೆಬ್ರುವರಿ 01, 2020ಕ್ಕೆ ಬೆಳಗ್ಗೆ 6ಗಂಟೆಗೆ ಗಲ್ಲುಶಿಕ್ಷೆ ವಿಧಿಸಲಾಗುವುದು ಎಂದು ಹೇಳಲಾಗಿದೆ.
ಜನವರಿ 7ರಂದು ದೆಹಲಿ ನ್ಯಾಯಾಲಯ ಜಾರಿಗೊಳಿಸಿದ್ದ ಮೊದಲ ಡೆತ್ ವಾರಂಟ್ ನಲ್ಲಿ ಪ್ರಕರಣದ ನಾಲ್ವರು ಆರೋಪಿಗಳಿಗೆ ಜನವರಿ 22, 2020ರಂದು ಬೆಳಗ್ಗೆ 7ಗಂಟೆಗೆ ದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲುಶಿಕ್ಷೆ ನೀಡಲು ಆದೇಶ ನೀಡಲಾಗಿತ್ತು.
ದೋಷಿಗಳಿಗೆ ಗಲ್ಲುಶಿಕ್ಷೆ ನೀಡುವಲ್ಲಿ ಉಂಟಾಗುತ್ತಿರುವ ವಿಳಂಬದ ಕುರಿತು ಇಂದು ಪ್ರತಿಕ್ರಿಯೆ ನೀಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತಮ್ಮ ಸರ್ಕಾರದ ವತಿಯಿಂದ ಯಾವುದೇ ವಿಳಂಬವಾಗಿಲ್ಲ ಎಂದಿದ್ದರು. ಅವರ ಈ ಹೇಳಿಕೆಯನ್ನು ಸಂತ್ರಸ್ತೆಯ ತಾಯಿ ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಕೇಂದ್ರ ಸಚಿವೆಯಾಗಿರುವ ಸ್ಮೃತಿ ಇರಾನಿ ಅವರೂ ಕೂಡ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೂ ಮೊದಲು ಹೇಳಿಕೆ ನೀಡಿದ್ದ ಸಿಎಂ ಅರವಿಂದ್ ಕೆಜ್ರಿವಾಲ್, ದೆಹಲಿ ಸರ್ಕಾರದ ಆಧೀನಕ್ಕೆ ಬರುವ ಎಲ್ಲ ಕಾರ್ಯಗಳನ್ನು ಗಂಟೆಯೊಳಗೆ ಪೂರ್ಣಗೊಳಿಸಲಾಗಿದ್ದು, ಇಂತಹ ಗಂಭೀರ ಪ್ರಕರಣದಲ್ಲಿ ಯಾವುದೇ ರೀತಿಯ ವಿಳಂಬ ಮಾಡಲಾಗಿಲ್ಲ ಎಂದಿದ್ದರು. ಇದೇ ವೇಳೆ ಈ ಪ್ರಕರಣದಲ್ಲಿ ದೆಹಲಿ ಸರ್ಕಾರದ ಪಾತ್ರ ತುಂಬಾ ಕಡಿಮೆಯಾಗಿದ್ದು, ಅಪರಾಧಿಗಳಿಗೆ ಶೀಘ್ರವೇ ಗಲ್ಲುಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದರು.