ಜಲಪಾಯ್‌ಗಾರಿ : ಮಹಿಳೆ ಮೇಲೆ ರೇಪ್ ಮಾಡಿ, ನಂತರ ಮಹಿಳೆಯ ಗುಪ್ತಾಂಗಕ್ಕೆ ರಾಡ್ ತೂರಿರುವ ಅಮಾನುಷ ಘಟನೆ ಪಶ್ಚಿಮ ಬಂಗಾಳದ ಜಲಪಾಯ್‌ಗಾರಿ ಜಿಲ್ಲೆಯಲ್ಲಿ ನಡೆದಿದೆ. ದೌರ್ಜನ್ಯಕ್ಕೆ ಗುರಿಯಾದ ಮಹಿಳೆಯನ್ನು ಜಲಪಾಯ್‌ಗಾರಿಯ ಸದರ್‌ ಆಸ್ಪತ್ರೆಗೆ ಸೇರಿಸಲಾಗಿದ್ದು ಆಕೆಯ ಸ್ಥಿತಿ ಚಿಂತಾಜನಕವಿದೆ. ಈ ಘಟನೆಯು 2012 ರಲ್ಲಿ ನವದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ನೆನಪುಗಳನ್ನು ಮರಳಿ ತಂದಿದೆ. 


COMMERCIAL BREAK
SCROLL TO CONTINUE READING

ಪಶ್ಚಿಮ ಬಂಗಾಳದ ಜಲಪಾಯ್‌ಗಾರಿ ಜಿಲ್ಲೆಯಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೋಪಗೊಂಡಿದ್ದ ಸಂಬಂಧಿಯೋರ್ವ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ನಂತರ ಮಹಿಳೆಯ ಗುಪ್ತಾಂಗಕ್ಕೆ ರಾಡ್ ಸೇರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಧೂಪ್‌ ಗುರಿ ಪೊಲೀಸ್‌ ಠಾಣೆ ವ್ಯಾಪ್ತಿ ಪ್ರದೇಶದಲ್ಲಿನ ನಿರಂಜನ್‌ ಪಾತ್‌ ಪ್ರದೇಶದಲ್ಲಿರುವ ಮಹಿಳೆಯ ಮನೆ ಹತ್ತಿರದ ಕೊಳವೊಂದರ ಬಳಿ ಕಳೆದ ಶನಿವಾರ ರಾತ್ರಿ ಮಹಿಳೆಯ ಮೇಲಿನ ಅತ್ಯಾಚಾರ ನಡೆದಿದೆ.  


ಭೂ ವಿವಾದವನ್ನು ಪರಿಹರಿಸುವುದಿದೆ, ಹೊರಗೆ ಬಾ ಎಂದು ಆರೋಪಿಯು ಮಹಿಳೆಯನ್ನು ಮನೆ ಮುಂದೆ ನಿಂತು ಕರೆದಿದ್ದ. ಈ ಹಿನ್ನೆಲೆಯಲ್ಲಿ ಮನೆಯಿಂದ ಹೊರಬಂದ ಮಹಿಳೆಯನ್ನು ಆತ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ ಆಕೆಯ ಗುಪ್ತಾಂಗಕ್ಕೆ ರಾಡ್‌ ತೂರಿದ ಎಂಬ ವಿಷಯ ರೇಪ್‌ ಸಂತ್ರಸ್ತೆಯ ಹೇಳಿಕೆಯಿಂದ ಗೊತ್ತಾಗಿದೆ. ಆತನ ಜತೆಗೆ ಇನ್ನೋರ್ವ ವ್ಯಕ್ತಿ ಇದ್ದನಾದರೂ ಆತ ಅತ್ಯಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಸಂತ್ರಸ್ತ ಮಹಿಳೆ ಮಾಹಿತಿ ನೀಡಿದ್ದಾರೆ.
 
ಓರ್ವ ರಿಕ್ಷಾ ಚಾಲಕ ಆಕೆಯನ್ನು ಗುರುತಿಸಿ ಆಕೆಯ ಮನೆಗೆ ತಲುಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ ಆಕೆಯನ್ನು ಧೂಪ್‌ ಗುರಿ ಆಸ್ಪತ್ರೆಗೆ ಸೇರಿಸಲಾಗಿದೆ. ಬಳಿಕ ಅಲ್ಲಿಂದ ಆಕೆಯನ್ನು ಜಲಪಾಯ್‌ಗಾರಿ ಸದರ್‌ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.


ಸದ್ಯ ಆರೋಪಿ ಮತ್ತು ಆತನ ಜತೆಗಿದ್ದವನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.