ನವದೆಹಲಿ:2012 ರಲ್ಲಿ ಇಡೀ ದೇಶವನ್ನು ಬೆಚ್ಚಿ ಬೀಳಿಸಿದ ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ ವಿನಯ್ ಶರ್ಮಾ, ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರಿಗೆ ಪತ್ರ ಬರೆದು ತಾವು ತಮ್ಮ ಕ್ಷಮಾದಾನ ಅರ್ಜಿಯನ್ನು ಹಿಂಪಡೆಯುತ್ತಿರುವುದಾಗಿ ಹೇಳಿದ್ದಾನೆ. ಇಂತಹ ಯಾವುದೇ ಅರ್ಜಿಗೆ ನಾನು ಸಹಿ ಹಾಕಿಲ್ಲ ಹಾಗೂ ನನ್ನ ವಿರುದ್ಧ ಪಿತೂರಿ ನಡೆಸಲಾಗಿದೆ ಎಂದು ವಿನಯ್ ಶರ್ಮಾ ತನ್ನ ಪತ್ರದಲ್ಲಿ ಹೇಳಿಕೊಂಡಿದ್ದಾನೆ.


COMMERCIAL BREAK
SCROLL TO CONTINUE READING

ಸಾಮಾಜಿಕ ಮಾಧ್ಯಮಗಳಲ್ಲಿ ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ವಿನಯ್ ಶರ್ಮಾ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದು, ಶಿಕ್ಷೆ ಜಾರಿಗೊಳಿಸುವಲ್ಲಿ ವಿಳಂಬ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎನ್ನಲಾಗಿದೆ. ಶನಿವಾರ ವಿನಯ್ ಶರ್ಮಾ ಪರ ವಕೀಲ ಎ.ಪಿ ಸಿಂಗ್ ಗೃಹ ಸಚಿವಾಲಯ ರಾಷ್ಟ್ರಪತಿಗಳಿಗೆ ಕಳುಹಿಸಿದ ಕ್ಷಮಾದಾನ ಅರ್ಜಿಯಲ್ಲಿ ವಿನಯ್ ಶರ್ಮಾ ಸಹಿ ಹಾಕಿಲ್ಲ. ಹೀಗಾಗಿ ಕ್ಷಮಾದಾನ ಅರ್ಜಿಯನ್ನು ಹಿಂಪಡೆಯಲು ತಮಗೆ ಅನುಮತಿಸಬೇಕು ಎಂದು ಕೋರಿದ್ದಾರೆ.


ಇನ್ನೊಂದೆಡೆ ನಿರ್ಭಯಾ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟಗೊಂಡು ಈಗಾಗಲೇ ಏಳು ವರ್ಷ ಕಳೆದು ಹೋಗಿವೆ. ಹೀಗಾಗಿ ಅಪರಾಧಿಗಳಿಗೆ ತಕ್ಷಣ ಮರಣದಂಡನೆ ನೀಡಲು ಸೂಕ್ತ ಕ್ರಮ ಜರುಗಿಸುವುದರ ಜೊತೆಗೆ ಅತ್ಯಾಚಾರಿಗಳಿಗೆ ತಕ್ಷಣ ಶಿಕ್ಷೆಯಾಗುವಂತೆ ಕಾನೂನಿನಲ್ಲಿ ಬದಲಾವಣೆಗಳನ್ನು ತರಬೇಕು. ಅಲ್ಲದೆ ಇಂತಹ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ


2012ರಲ್ಲಿ ವಿನಯ್ ಶರ್ಮಾ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳು ಚಲಿಸುತ್ತಿದ್ದ ಬಸ್ ನಲ್ಲಿ 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಳು. ದೇಶಾದ್ಯಂತ ಈ ಕ್ರೂರ ಕೃತ್ಯವನ್ನು ಖಂಡಿಸಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಆ ಬಳಿಕ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ನಾಲ್ವರು ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ, 17 ವರ್ಷ ವಯಸ್ಸಿನ ಓರ್ವ ಅಪ್ರಾಪ್ತ ಅಪರಾಧಿಯನ್ನು ಬಾಲಗೃಹಕ್ಕೆ ಕಳುಹಿಸಿತ್ತು.