ಸಂಸತ್ತಿನಲ್ಲಿ ರಾಹುಲ್ ಗಾಂಧಿಗೆ ಮುಂದಿನ ಸಾಲಿನಲ್ಲಿ ಸ್ಥಾನ ನೀಡಲು ಡಿಮ್ಯಾಂಡ್ ಮಾಡಿಲ್ಲ, ಇದೆಲ್ಲಾ ವದಂತಿ!
ರಾಹುಲ್ ಗಾಂಧಿಗೆ ಸಂಸತ್ತಿನಲ್ಲಿ ಮುಂದಿನ ಸಾಲಿನಲ್ಲಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಡಿಮ್ಯಾಂಡ್ ಮಾಡಿದೆ ಎಂಬುದು ಕೇವಲ ವದಂತಿಯಷ್ಟೇ ಎಂದು ಅಧೀರ್ ರಂಜನ್ ಚೌಧರಿ ಸ್ಪಷ್ಟಪಡಿಸಿದ್ದಾರೆ.
ನವದೆಹಲಿ: ಕಾಂಗ್ರೆಸ್ ನಿರ್ಗಮಿತ ಅಧ್ಯಕ್ಷ ರಾಹುಲ್ ಗಾಂಧಿಗೆ ಸಂಸತ್ತಿನಲ್ಲಿ ಮುಂದಿನ ಸಾಲಿನಲ್ಲಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಡಿಮ್ಯಾಂಡ್ ಮಾಡಿದೆ ಎಂಬುದು ಕೇವಲ ವದಂತಿಯಷ್ಟೇ, ಪಕ್ಷವು ಅಂತಹ ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸ್ಪಷ್ಟಪಡಿಸಿದ್ದಾರೆ.
"ರಾಹುಲ್ ಜಿ ಆಗಲೀ ಅಥವಾ ಕಾಂಗ್ರೆಸ್ ಪಕ್ಷವಾಗಲೀ ಸಂಸತ್ತಿನಲ್ಲಿ ಮೊದಲ ಸಾಲಿನ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ. ಆದರೆ ನಾವು ರಾಹುಲ್ ಗಾಂಧಿ ಅವರಿಗೆ ಸೀಟ್ ಸಂಖ್ಯೆ 466ನ್ನು ನೀಡುವಂತೆ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದೇವೆ" ಎಂದು ಚೌಧರಿ ಟ್ವೀಟ್ ಮಾಡಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಗೆ ಮುಂದಿನ ಸಾಲಿನ ಸ್ಥಾನ ನೀಡಬೇಕೆಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಚೌಧರಿ ಸ್ಪಷ್ಟನೆ ನೀಡಿದ್ದಾರೆ.
16ನೇ ಲೋಕಸಭೆಯಲ್ಲೂ ಕಾಂಗ್ರೆಸ್ ಮುಂದಿನ ಸಾಲಿನಲ್ಲಿ ಎರಡು ಸ್ಥಾನಗಳನ್ನು ಪಡೆದಿತ್ತು. ಅದರಲ್ಲಿ ಒಂದು ಸ್ಥಾನವನ್ನು ಸೋನಿಯಾಗಾಂಧಿಗೆ ಮತ್ತು ಮತ್ತೊಂದು ಸ್ಥಾನವನ್ನು ಪಕ್ಷದ ಮುಖಂಡ ಮಲ್ಲಿಕಾರ್ಜುನ್ ಖರ್ಗೆಗೆ ನೀಡಲಾಗಿತ್ತು.