China-Pakistanಗಳಿಗೆ ಮತ್ತೊಂದು ಆರ್ಥಿಕ ಪೆಟ್ಟು, ವಿದ್ಯುತ್ ಉಪಕರಣಗಳ ಆಮದಿನ ಮೇಲೆ ಬ್ರೇಕ್, ಕೇಂದ್ರ ಸಚಿವ ಆರ್.ಕೆ. ಸಿಂಗ್ ಘೋಷಣೆ
ಭಾರತವು ಇನ್ನು ಮುಂದೆ ಚೀನಾದಂತಹ ದೇಶಗಳಿಂದ ವಿದ್ಯುತ್ ಉಪಕರಣಗಳನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ವಿದ್ಯುತ್ ಸಚಿವ ಆರ್.ಕೆ.ಸಿಂಗ್ ಶುಕ್ರವಾರ ಹೇಳಿದ್ದಾರೆ.
ನವದೆಹಲಿ: ಭಾರತವು ಇನ್ನು ಮುಂದೆ ಚೀನಾದಂತಹ ದೇಶಗಳಿಂದ ವಿದ್ಯುತ್ ಉಪಕರಣಗಳನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂದು ವಿದ್ಯುತ್ ಸಚಿವ ಆರ್.ಕೆ.ಸಿಂಗ್ ಶುಕ್ರವಾರ ಹೇಳಿದ್ದಾರೆ. ವಿತರಣಾ ಕಂಪನಿಗಳನ್ನು (ಡಿಸ್ಕೋಮ್) ಆರ್ಥಿಕವಾಗಿ ಬಲಪಡಿಸುವುದು ಅವಶ್ಯಕತೆ ಇದ್ದು, ಈ ರೀತಿ ಮಾಡದೆ ಹೋದಲ್ಲಿ ಈ ಕ್ಷೇತ್ರ ಕಾರ್ಯಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿರುವ ಅವರು, ಈ ವಿಷಯ ತಿಳಿಸಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆಯೋಜಿಸಿದ್ದ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, “ಪ್ರಾಯರ್ ರೆಫೆರೆನ್ಸ್ ಕಂಟ್ರಿ (ಹಿಂದೆ ಉಲ್ಲೇಖಿಸಲಾದ ದೇಶಗಳಿಂದ) ಉಪಕರಣಗಳ ಆಮದನ್ನು ಅನುಮತಿಸಲಾಗುವುದಿಲ್ಲ. ಇದರ ಅಡಿಯಲ್ಲಿ, ನಾವು ಕೆಲ ದೇಶಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದು, ಈ ಪಟ್ಟಿ ಪ್ರಮುಖವಾಗಿ ಚೀನಾ ಮತ್ತು ಪಾಕಿಸ್ತಾನವನ್ನು ಒಳಗೊಂಡಿದೆ." ಎಂದಿದ್ದಾರೆ.
ಭಾರತಕ್ಕೆ ಬೆದರಿಕೆ ಒಡ್ಡುವ ಅಥವಾ ಭಾರತಕ್ಕೆ ಆ ದೇಶಗಳಿಂದ ಶಂಕಿತ ಬೆದರಿಕೆ ಇರುವ ದೇಶಗಳನ್ನು 'ಪ್ರಾಯರ್ ರೆಫೆರೆನ್ಸ್ ಕಂಟ್ರಿ' ಗಳ ಪಟ್ಟಿಯಲ್ಲಿ ಇರಿಸಲಾಗುತ್ತದೆ. ಇದರಲ್ಲಿ ಭಾರತದ ಗಡಿಗೆ ಹೊಂದಿಕೊಂಡಂತೆ ಇರುವ ದೇಶಗಳು ಪ್ರಮುಖವಾಗಿ ಈ ಪಟ್ಟಿಯಲ್ಲಿ ಇರುತ್ತವೆ. ಇದರಲ್ಲಿ ಮುಖ್ಯವಾಗಿ ಚೀನಾ ಮತ್ತು ಪಾಕಿಸ್ತಾನ ದೇಶಗಳಿವೆ. ರಾಜ್ಯಗಳಿಗೂ ಕೂಡ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಅವರು ಸೂಚಿಸಿದ್ದಾರೆ.
ಲಡಾಖ್‌ನಲ್ಲಿ ನಡೆದ ಗಡಿ ವಿವಾದದಲ್ಲಿ ಭಾರತೀಯ ಮತ್ತು ಚೀನಾದ ಮಿಲಿಟರಿ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿರುವ ಹಿನ್ನೆಲೆಯಲ್ಲಿ ಸಿಂಗ್ ಅವರ ಈ ಘೋಷಣೆ ಭಾರಿ ಮಹತ್ವ ಪಡೆದುಕೊಂಡಿದೆ. "ನಮ್ಮ ದೇಶದಲ್ಲಿಯೇ ಸಾಕಷ್ಟು ಪ್ರಮಾಣದಲ್ಲಿ ಈ ಉಪಕರಣಗಳನ್ನು ತಯಾರಿಸಲಾಗುತ್ತದೆ. ಅದರ ಹೊರತಾಗಿಯೂ ನಾವು ಅಪಾರ ಪ್ರಮಾಣದ ವಿದ್ಯುತ್ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ. ಇದು ಇನ್ನು ಮುಂದೆ ನಡೆಯುವುದಿಲ್ಲ. 2018-19ರಲ್ಲಿ ದೇಶವು 71,000 ಕೋಟಿ ರೂ.ಗಳ ವಿದ್ಯುತ್ ಉಪಕರಣಗಳನ್ನು ಆಮದು ಮಾಡಿಕೊಂಡಿದ್ದು, ಇದರಲ್ಲಿ ಚೀನಾ ಬಳಿಯಿಂದ ಸುಮಾರು 21 ಸಾವಿರ ಕೋಟಿ ರೂ. ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗಿದೆ.
"ಮುಂದೆಯೂ ಕೂಡ ಇತರೆ ದೇಶಗಳಿಂದ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗುವುದು, ಆದರೆ, ದೇಶದ ಪ್ರಯೋಗಾಲಯಗಳಲ್ಲಿ ಅವುಗಳಲ್ಲಿ ಮಾಲ್ವೇರ್ ಮತ್ತು ಟ್ರೋಜನ್ ಹಾರ್ಸ್ ಗಳನ್ನು ಬಳಸಲಾಗಿದೆಯೇ ಎಂಬುದರ ಕುರಿತು ಕೂಲಂಕುಷವಾಗಿ ಪರೀಕ್ಷೆ ನಡೆಸಿ ಅವುಗಳ ಬಳಕೆಗೆ ಅನುಮತಿ ನೀಡಲಾಗುವುದು" ಎಂದೂ ಕೂಡ ಸಚಿವರು ಸ್ಪಷ್ಟಪಡಿಸಿದ್ದಾರೆ.