ಶೋಪಿಯಾನ್‌ನಲ್ಲಿ ಓರ್ವ ಭಯೋತ್ಪಾದಕನನ್ನು ಹತ್ಯೆಗೈದ ಭದ್ರತಾ ಪಡೆ
ಮುಂಜಾನೆ ಪ್ರಾರಂಭವಾದ ಎನ್‌ಕೌಂಟರ್‌ನಲ್ಲಿ ಎರಡೂ ಕಡೆಯಿಂದ ಗುಂಡಿನ ದಾಳಿ ಆರಂಭವಾಯಿತು.
ಶೋಪಿಯಾನ್: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಬೆಳಿಗ್ಗೆ 5: 30 ರ ಸುಮಾರಿಗೆ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಆರಂಭವಾದ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕನನ್ನು ಹತ್ಯೆಗೈಯಲಾಗಿದೆ. ಶೋಪಿಯಾನ್‌ನ ಸೊಗ್ಲು ಹೆಂಡಮ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆಯುತ್ತಿದ್ದು ಭದ್ರತಾ ಪಡೆಗಳ ಜಂಟಿ ತಂಡ ಈ ಕಾರ್ಯಾಚರಣೆಯನ್ನು ಮುಂದುವರೆಸಿದ್ದು ಇದರಲ್ಲಿ ಜಮ್ಮು ಮತ್ತು ಕಾಶ್ಮೀರ (Jammu and Kashmir) ಪೊಲೀಸ್, 44 ಆರ್ಆರ್ ಮತ್ತು CRPF ಸೇರಿವೆ.
ಮುಂಜಾನೆ ಶೋಪಿಯಾನ್‌ನಲ್ಲಿ ಪ್ರಾರಂಭವಾದ ಎನ್‌ಕೌಂಟರ್‌ನಲ್ಲಿ ಎರಡೂ ಕಡೆಯಿಂದ ಗುಂಡಿನ ದಾಳಿ ನಡೆಯುತ್ತಿದೆ. ಭದ್ರತಾ ಪಡೆಗಳು ಎಲ್ಲೆಡೆಯಿಂದ ಭಯೋತ್ಪಾದಕರನ್ನು ಸುತ್ತುವರೆದಿದ್ದು ಉಗ್ರರು ತಪ್ಪಿಸಿಕೊಳ್ಳಲು ಸಾಧ್ಯವಾಗದ ಕಾರಣ ಭದ್ರತಾ ಪಡೆ ಮೇಲೆ ಗುಂಡಿನ ಮಳೆಗೈಯಲು ಆರಂಭಿಸಿದ್ದಾರೆ ಎನ್ನಲಾಗಿದೆ.
ಭದ್ರತಾ ಪಡೆಗಳ ಜಂಟಿ ತಂಡ ಮತ್ತು ಉಗ್ರರ ನಡುವೆ ಮುಖಾಮುಖಿ ಪ್ರಾರಂಭವಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ ಮತ್ತು ಲಭ್ಯವಾದ ಮಾಹಿತಿ ಪ್ರಕಾರ 2-3 ಉಗ್ರರು ಅಡಗಿರುವುದರ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಿವೆ.
ಭದ್ರತಾ ಪಡೆಗಳ ಜಂಟಿ ತಂಡವು ಅನುಮಾನಾಸ್ಪದ ಸ್ಥಳವನ್ನು ಸುತ್ತುವರಿದಾಗ, ಗುಪ್ತ ಭಯೋತ್ಪಾದಕರು ಅವರ ಮೇಲೆ ಗುಂಡು ಹಾರಿಸಲಾರಂಭಿಸಿದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಭದ್ರತಾ ಪಡೆ ಕೂಡ ಇದಕ್ಕೆ ಸೂಕ್ತ ಉತ್ತರವನ್ನು ನೀಡಿತು ಮತ್ತು ಎನ್ಕೌಂಟರ್ (Encounter) ಪ್ರಾರಂಭವಾಯಿತು. ಆದರೆ, ಭಯೋತ್ಪಾದಕರಿಗೆ ಮೊದಲು ಶರಣಾಗಲು ಅವಕಾಶ ನೀಡಲಾಯಿತು. ಆದರೆ ಅವರು ಒಪ್ಪಲಿಲ್ಲ ಎನ್ನಲಾಗಿದೆ.
ಕಳೆದ ಒಂದು ವಾರದಲ್ಲಿ ಶೋಪಿಯಾನ್ (Shopian) ಜಿಲ್ಲೆಯಲ್ಲಿ ನಡೆಯುತ್ತಿರುವ ಮೂರನೇ ಎನ್‌ಕೌಂಟರ್ ಇದಾಗಿದೆ. ಜಿಲ್ಲೆಯಲ್ಲಿ ಕಳೆದ ಎರಡು ಎನ್‌ಕೌಂಟರ್‌ಗಳಲ್ಲಿ 9 ಭಯೋತ್ಪಾದಕರು ಹತರಾಗಿದ್ದಾರೆ. ಪೊಲೀಸರ ಪ್ರಕಾರ ಅವರಲ್ಲಿ ಮೂವರು ಕಮಾಂಡರ್‌ಗಳು, ಇವರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವರು.
ಇದಕ್ಕೂ ಮುನ್ನ ಮಂಗಳವಾರ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಾರತೀಯ ಸೇನೆಯ ರೋಡ್ ಆಪರೇಟಿಂಗ್ ಪಾರ್ಟಿ ಎನ್‌ಎಚ್ -701 ಎ ಯಲ್ಲಿ ಟ್ರಾಗ್‌ಪೋರಾ ಮತ್ತು ಲಾಡುರಾ ನಡುವೆ ಐಇಡಿ ವಶಪಡಿಸಿಕೊಂಡಿದೆ. ಐಇಡಿಯನ್ನು ನಂತರ ಹತ್ತಿರದ ಉದ್ಯಾನಗಳಲ್ಲಿ ಬಾಂಬ್ ವಿಲೇವಾರಿ ದಳದ ಸಿಬ್ಬಂದಿ ಸ್ಫೋಟಿಸಿದರು.
ಭದ್ರತಾ ಪಡೆಗಳು, 'ಬೆಳಿಗ್ಗೆ 6 ಗಂಟೆ ಸುಮಾರಿಗೆ, 32 ಆರ್ಆರ್ ಮತ್ತು 40 ಬಿಎನ್ ಬಿಎಸ್ಎಫ್ ರೋಡ್ ಆಪರೇಟಿಂಗ್ ಪಾರ್ಟಿ ಗೆ ಐಇಡಿ ಬಗ್ಗೆ ತಿಳಿದುಬಂದಿದೆ. ಟ್ರಾಗ್ಪೋರಾ ಮತ್ತು ಲಾಡುರಾ ನಡುವಿನ ಎನ್ಎಚ್ 701 ಎ ನಲ್ಲಿ ಐಇಡಿ ವಶಪಡಿಸಿಕೊಳ್ಳಲಾಗಿದೆ ಎಂದು ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.