ನವದೆಹಲಿ: ಸಫಾಯಿ ಕರ್ಮಚಾರಿಗಳ ಪುನರ್ವಸತಿಗಾಗಿ ಈ ಬಾರಿ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕೇವಲ 110 ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.


COMMERCIAL BREAK
SCROLL TO CONTINUE READING

ಒಳ ಚರಂಡಿಗಳಲ್ಲಿ ಮೃತಪಟ್ಟಿರುವ 116 ಸಫಾಯಿ ಕರ್ಮಚಾರಿಗಳ ಜೀವನ ಸರ್ಕಾರಕ್ಕೆ ಮುಖ್ಯ ಆಧ್ಯತೆಯಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ ಎಂದು ಸಫಾಯಿ ಕರ್ಮಚಾರಿ ಆಂದೋಲನದ ಮುಖ್ಯಸ್ಥ ಹಾಗೂ ರಾಮನ್ ಮ್ಯಾಗ್ಸೆಸೆ ಪುರಸ್ಕೃತ ಬೇಜವಾಡ್ ವಿಲ್ಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಹಣವು ಶೌಚಾಲಯಗಳಿಗೆ ಮಾತ್ರ ಮೀಸಲಾಗಿದೆ, ಹೊರತು ಸಫಾಯಿ ಕರ್ಮಚಾರಿಗಳಿಗಲ್ಲ ಎಂದಿದ್ದಾರೆ.



ಸಫಾಯಿ ಕರ್ಮಚಾರಿಗಳ ಪುನರ್ವಸತಿ ಹಾಗೂ ಸ್ವಯಂ ಉದ್ಯೋಗ ಯೋಜನೆಗೆ ನಯಾ ಪೈಸೆಯನ್ನೂ ಹೆಚ್ಚಿಸಿಲ್ಲ. 2019-20 ರಲ್ಲಿ ಇದು110 ಕೋಟಿಯಾಗಿದ್ದರೆ 2020-21 ರಲ್ಲಿಯೂ ಕೂಡ 110 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ ಬಗ್ಗೆ ಸಫಾಯಿ ಕರ್ಮಚಾರಿ ಆಂದೋಲನ ಅಸಮಾಧಾನ ವ್ಯಕ್ತಪಡಿಸುತ್ತಾ, 'ಇದು ನಮಗೆ ಏನೂ ಅಲ್ಲ, ಇದು ಸಮುದಾಯದ ಶೋಚನೀಯ ಸ್ಥಿತಿಯ ಬಗ್ಗೆ ಕನಿಷ್ಠ ಕಾಳಜಿಯನ್ನು ಸಹ ತೋರಿಸಿಲ್ಲ. ಹಲವು ಬಾರಿ ನಿಯೋಗದ ಮೂಲಕ ಈ ಬಗ್ಗೆ ಗಮನ ಸೆಳೆದರೂ ಕೂಡ ಸಫಾಯಿ ಕರ್ಮಚಾರಿಗಳ ಪುನರ್ವಸತಿ ಮತ್ತು ವಿಮೋಚನೆಗಾಗಿ ಹಂಚಿಕೆಯನ್ನು ಹೆಚ್ಚಿಸಲು ಬಜೆಟ್ ಯಾವುದೇ ಮನಸ್ಸು ಮಾಡಿಲ್ಲ' ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.


ನೈರ್ಮಲ್ಯ ಮತ್ತು ಸ್ವಚ್ಚ ಭಾರತ್ ಮಿಷನ್ ಮೇಲೆ ಹೆಚ್ಚಿನ ಅನುದಾನದ ವಿಚಾರವಾಗಿ ಪ್ರಸ್ತಾಪಿಸಿದ ಬೇಜವಾಡ ವಿಲ್ಸನ್, '2014 ರಲ್ಲಿ ಮೋದಿ ಸರ್ಕಾರ ಸ್ವಚ್ಛ ಭಾರತ ಮಿಶನ್ ಅನ್ನು ಪ್ರಾರಂಭಿಸಿದರೂ, ಹಸ್ತಚಾಲಿತ ಸ್ಕ್ಯಾವೆಂಜಿಂಗ್‌ನಲ್ಲಿ ತೊಡಗಿರುವ ಸಫಾಯಿ ಕರ್ಮಚಾರಿಗಳು ಇನ್ನೂ ಅದೇ ಸ್ಥಿತಿಯಲ್ಲಿ ಮುಂದುವರೆದಿದ್ದಾರೆ, ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ನಲ್ಲಿ ಭಾರತೀಯ ನಾಗರಿಕರು ಸಾಯುತ್ತಲೇ ಇದ್ದರೂ ಸರ್ಕಾರ ಈ ಯೋಜನೆ ಯಶಸ್ಸನ್ನು ಪ್ರತಿಪಾದಿಸುತ್ತಿದೆ.ಆದರೆ ಹೆಚ್ಚುತ್ತಿರುವ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಸಾವುಗಳ ಬಗ್ಗೆ ಸರ್ಕಾರ ಮೌನ ನಿಲುವು ತಾಳಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.