`ಮೋದಿ ಭಾರತದ ಪಿತಾಮಹ` ಎಂದ ಟ್ರಂಪ್ ವಿರುದ್ಧ ಒವೈಸಿ ಕಿಡಿ
ಮೋದಿಯನ್ನು ರಾಷ್ಟ್ರದ ಪಿತಾಮಹ ಎಂದು ಕರೆದಿರುವ ಟ್ರಂಪ್ ಅವರನ್ನು `ಅನಕ್ಷರಸ್ಥ` ಎಂದಿದ್ದು, ಅವರಿಗೆ ಭಾರತದ ಇತಿಹಾಸದ ಬಗ್ಗೆ ಅರಿವಿಲ್ಲ. ಮಹಾತ್ಮ ಗಾಂಧಿ ಬಗ್ಗೆ ಟ್ರಂಪ್ ಗೆ ಏನೂ ತಿಳಿದಿಲ್ಲ ಎಂದು ಒವೈಸಿ ವಾಗ್ದಾಳಿ ನಡೆಸಿದ್ದಾರೆ.
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿಯನ್ನು 'ಭಾರತದ ಪಿತಾಮಹ' ಎಂದು ಕರೆದಿದ್ದಕ್ಕಾಗಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯನ್ನು ರಾಷ್ಟ್ರದ ಪಿತಾಮಹ ಎಂದು ಕರೆದಿರುವ ಟ್ರಂಪ್ ಅವರನ್ನು 'ಅನಕ್ಷರಸ್ಥ' ಎಂದಿದ್ದು, ಅವರಿಗೆ ಭಾರತದ ಇತಿಹಾಸದ ಬಗ್ಗೆ ಅರಿವಿಲ್ಲ. ಮಹಾತ್ಮ ಗಾಂಧಿ ಬಗ್ಗೆ ಟ್ರಂಪ್ ಗೆ ಏನೂ ತಿಳಿದಿಲ್ಲ. ಮೋದಿ ಮತ್ತು ಗಾಂಧೀಜಿಯನ್ನು ಹೋಲಿಸಲೂ ಸಾಧ್ಯವಿಲ್ಲ. ಭಾರತಕ್ಕಾಗಿ ಹಲವು ತ್ಯಾಗಗಳನ್ನು ಮಾಡಿದ್ದಕಾಗಿ ಗಾಂಧೀಜಿಗೆ 'ರಾಷ್ಟ್ರಪಿತ' ಗೌರವ ಸಂದಿದೆ. ಮೋದಿಯವರ ಮಾಡಿರುವ ಸಾಧನೆಯೇನು? ಈ ಬಗ್ಗೆ ಟ್ರಂಪ್ ಸಾಕಷ್ಟು ತಿಳಿಯಬೇಕಿದೆ ಎಂದು ಹೇಳಿದ್ದಾರೆ.
ಆದರೆ, ನರೇಂದ್ರ ಮೋದಿಯನ್ನು ಅಮೆರಿಕದ ಸಂಗೀತಗಾರ ಎಲ್ವಿಸ್ ಪ್ರೀಸ್ಲಿ ಅವರಿಗೆ ಹೊಲಿಸಿರುವುದನ್ನು ಒಪ್ಪಿರುವುದಾಗಿ ಹೇಳಿದ ಒವೈಸಿ, ಪ್ರೀಸ್ಲಿ ತಮ್ಮ ಹಾಡುಗಳೊಂದಿಗೆ ಕೇಳುಗರನ್ನು ಮಂತ್ರಮುಗ್ಧಗೊಳಿಸುತ್ತಾರೆ. ಅದನ್ನೇ ಮೋದಿ ಭಾಷಣದ ಮೂಲಕ ಮಾಡುತ್ತಾರೆ. ಹಾಗಾಗಿ ಎಲ್ವಿಸ್ ಜೊತೆ ಹೋಲಿಕೆಯಿರುವ ನಮ್ಮ ಪ್ರಧಾನಿಗಳನ್ನು ನಾನು ಕೀಳಾಗಿಸುವುದಿಲ್ಲ ಎಂದು ಒವೈಸಿ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ರೀತಿಯಲ್ಲಿ ಕಾಣುವ ಬಗ್ಗೆ ಟ್ರಂಪ್ ಮಾತುಗಳಿಗೆ ಅಸಮಾಧಾನ ವ್ಯಕ್ತಪಡಿಸಿದ ಒವೈಸಿ, "ಭಾರತ ಮಹಾನ್ ರಾಷ್ಟ್ರ. ಆದರೆ ಭಾರತವನ್ನು ಪಾಕಿಸ್ತಾನದೊಂದಿಗೆ ಹೈಫನೇಟ್ ಮಾಡಲಾಗಿದೆ ಎಂಬುದು ಪ್ರಧಾನಿ ಮೋದಿಯವರ ವೈಫಲ್ಯ. ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದಿದ್ದಾರೆ. ಅಲ್ಲದೆ, ಎರಡೂ ರಾಷ್ಟ್ರಗಳನ್ನು ಹೊಗಳಿ ಮೈಂಡ್ ಗೇಮ್ ಆಡುವ ಮೂಲಕ ಟ್ರಂಪ್ ಡಬಲ್ ಗೇಮ್ ಆಡುತ್ತಿದ್ದಾರೆ ಎಂದು ಕಿಡಿ ಕಾರಿದರು.