ಶ್ರೀನಗರ: ಪಾಕಿಸ್ತಾನ ತನ್ನ ಚಾಳಿ ಮುಂದುವರೆಸಿದ್ದು, ಮತ್ತೊಮ್ಮೆ ಕದನ ವಿರಾಮ(Ceasefire violation) ಉಲ್ಲಂಘಿಸಿದೆ. ಪೂಂಚ್ ಜಿಲ್ಲೆಯ ಎಲ್‌ಒಸಿ ಉದ್ದಕ್ಕೂ ಶಾಪುರ, ಕಿರ್ನಿ ಮತ್ತು ಕಸ್ಬಾ ವಲಯದಲ್ಲಿ ಗುಂಡಿನ ಕಾಳಗ ನಡೆಸಿದೆ. ಇದಕ್ಕೆ ಭಾರತೀಯ ಸೇನೆ ಕೂಡ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ಉಗ್ರರನ್ನು ದೇಶದ ಒಳಗೆ ನುಗ್ಗಿಸಲು ಪಾಕಿಸ್ತಾನ ಈ ರೀತಿಯ ವಿಫಲ ಪ್ರಯತ್ನವನ್ನು ಮಾಡುತ್ತಲೇ ಇದೆ.  ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ  ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ(Jammu and Kashmir) ನಿಯಂತ್ರಣ ರೇಖೆಯ ಉದ್ದಕ್ಕೂ(LoC) ಐದು ವರ್ಷಗಳಲ್ಲೇ ಹೆಚ್ಚು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ.


ಭಾರತೀಯ ಸೇನೆಯ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 2 ರವರೆಗೆ ಪಾಕಿಸ್ತಾನ(Pakistan)ವು 2,225 ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಅಂದರೆ ಈ ಅವಧಿಯಲ್ಲಿ ಅದು ಕದನ ವಿರಾಮವನ್ನು ದಿನಕ್ಕೆ ಸರಾಸರಿ ಎಂಟು ಬಾರಿ ಉಲ್ಲಂಘಿಸಿದೆ. ಇದಕ್ಕೆ ಹೋಲಿಸಿದರೆ, 2018 ರಲ್ಲಿ ಇಡೀ ವರ್ಷದಲ್ಲಿ ಪಾಕಿಸ್ತಾನ 1,629 ಬಾರಿ ಕದನ ವಿರಾಮ ಉಲ್ಲಂಘನೆ ನಡೆಸಿದೆ.


ಆಗಸ್ಟ್ 2019 ರಿಂದ ಇದುವರೆಗೆ 84 ಬಾರಿ ಪಾಕ್ ಮೂಲಕದ ಭಯೋತ್ಪಾದಕರು ಅಕ್ರಮವಾಗಿ ಭಾರತದ ಗಡಿ ನುಸುಳಲು ಯತ್ನಿಸಿದ್ದು, ಒಟ್ಟು 59 ಭಯೋತ್ಪಾದಕರು ಭಾರತದ ಗಡಿಯೊಳಗೆ ನುಸುಳಿದ್ದಾರೆ ಎಂದು ಮಂಗಳವಾರ(ಡಿ.10) ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಲೋಕಸಭೆಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದರು.


ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸದ ಶ್ರೀಧರ್ ಕೊಟಗಿರಿ ಅವರು ಕೇಳಿದ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರಿಸಿರುವ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಈ ವಿಷಯ ತಿಳಿಸಿದ್ದಾರೆ. 1990 ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ 22,557 ಭಯೋತ್ಪಾದಕರನ್ನು ಭದ್ರತಾ ಪಡೆಗಳು ಮಟ್ಟಹಾಕಿವೆ.  2005 ರಿಂದ ಅಕ್ಟೋಬರ್ 31, 2019ರ ಅವಧಿಯಲ್ಲಿ ಒಟ್ಟು 1,011 ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದ್ದು, 42 ಭಯೋತ್ಪಾದಕರನ್ನು ಬಂಧಿಸಲಾಗಿದೆ ಹಾಗೂ 2253 ಭಯೋತ್ಪಾದಕರನ್ನು ಭದ್ರತಾಪಡೆ ಯೋಧರು ಹಿಮ್ಮೆಟ್ಟಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.