ಮುಂಬೈ: ವೀರ್ ಸಾವರ್ಕರ್ ಅವರು ಭಾರತದ ಪ್ರಧಾನ ಮಂತ್ರಿಯಾಗಿದ್ದರೆ ಪಾಕಿಸ್ತಾನ ಕೂಡ ರಚನೆಯಾಗುತ್ತಿರಲಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಸಾವರ್ಕರ್ ಅವರ ಜೀವನಚರಿತ್ರೆ ಆಧಾರಿತ 'ಸಾವರ್ಕರ್: ಎಕೋಸ್ ಫ್ರಮ್ ಎ ಫರ್ಗಟನ್ ಪಾಸ್ಟ್' ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದ ಅವರು, "ವೀರ್ ಸಾವರ್ಕರ್ ಈ ದೇಶದ ಪ್ರಧಾನ ಮಂತ್ರಿಯಾಗಿದ್ದರೆ ಪಾಕಿಸ್ತಾನ ಕೂಡ ಹುಟ್ಟುತ್ತಿರಲಿಲ್ಲ. ನಮ್ಮ ಸರ್ಕಾರ ಹಿಂದುತ್ವ ಸರ್ಕಾರ. ಈ ಹಿನ್ನೆಲೆಯಲ್ಲಿ ನಾನು ವೀರ್ ಸಾವರ್ಕರ್‌ಗೆ ಭಾರತ್ ರತ್ನವನ್ನು ನೀಡಬೇಕೆಂದು ಒತ್ತಾಯಿಸುತ್ತೇನೆ" ಎಂದು ಠಾಕ್ರೆ ಹೇಳಿದರು.


ದೇಶದ ಅಭಿವೃದ್ಧಿಗಾಗಿ ಮಹಾತ್ಮ ಗಾಂಧಿ ಮತ್ತು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸಾಕಷ್ಟು ಶ್ರಮಿಸಿದ್ದಾರೆ. ಅದನ್ನು ಎಂದಿಗೂ ಅಲ್ಲಗಳೆಯುವುದಿಲ್ಲ. ಆದರೆ ಭಾರತೀಯ ರಾಜಕಾರಣವು ಕೇವಲ ಎರಡು ಕುಟುಂಬಗಳಿಗೆ ಸೀಮಿತವಾಗಿದೆ. ವೀರ್ ಸಾವರ್ಕರ್ ಅವರು 14 ವರ್ಷಗಳ ಸುದೀರ್ಘ ಕಾಲ ಜೈಲಿನಲ್ಲಿದ್ದರು. ಅವರೆದುರು ನೆಹರೂ ಅವರು ಕೇವಲ 14 ನಿಮಿಷಗಳನ್ನು ಜೈಲಿನಲ್ಲಿ ಕಳೆದಿದ್ದರೂ ನಾನು ನೆಹರೂ ಅವರನ್ನು ವೀರ್ ಎಂದು ಕರೆಯುತ್ತಿದ್ದೆ" ಎಂದು ಠಾಕ್ರೆ ಹೇಳಿದರು.


ಈ ಹಿಂದೆ ಸಾವರ್ಕರ್ ಬಗ್ಗೆ ಟೀಕಿಸಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಠಾಕ್ರೆ, ಸಾವರ್ಕರ್ ಅವರ ಜೀವನಾಧಾರಿತ ಈ ಪುಸ್ತಕವನ್ನು ರಾಹುಲ್ ಗಾಂಧೀ ಓದಿ, ಅವರ ಸಾಧನೆಗಳು ಕಾರ್ಯಗಳ ಬಗ್ಗೆ ಇನ್ನಷ್ಟು ತಿಳಿಯಬೇಕಿದೆ ಎಂದರು.