ಕೊಲ್ಕತ್ತಾ: 1945ರಲ್ಲಿ ನಡೆದ ತೈವಾನ್ ವಿಮಾನ ದುರಂತದ ನಂತರ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಿಗೆ ಏನಾಯಿತು ಎಂಬ ಸತ್ಯ ತಿಳಿಯುವ ಹಕ್ಕು ದೇಶದ ಜನತೆಗೆ ಇದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

2015ರ ಈ ದಿನ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ನಿಗೂಢ ಸಾವು ಹಾಗೂ ಹಾಗೂ ಅವರ ಕುಟುಂಬದ ಮೇಲೆ ಸರ್ಕಾರ ನಡೆಸಿದೆ ಎನ್ನಲಾದ ಬೇಹುಗಾರಿಕೆ ಬಗ್ಗೆ ಮಾಹಿತಿಯನ್ನು ಒಳಗೊಂಡ 64 ರಹಸ್ಯ ಕಡತಗಳನ್ನು ತಮ್ಮ ಸರ್ಕಾರ ಬಹಿರಂಗಪಡಿಸಿದ್ದನ್ನು ಸ್ಮರಿಸಿದ ಬ್ಯಾನರ್ಜಿ, ವಿಮಾನ ಅಪಘಾತದ ಬಳಿಕ ತಮ್ಮ ಪ್ರೀತಿಯ ನಾಯಕನಿಗೆ ಏನಾಯಿತೆಂದು ತಿಳಿಯುವ ಅಧಿಕಾರ ಜನರಿಗಿದೆ ಎಂದು ಟ್ವೀಟ್ ಮಾಡಿದ್ದಾರೆ.


ಪಶ್ಚಿಮ ಬಂಗಾಳ ಸರ್ಕಾರವು 2015ರ ಸೆಪ್ಟೆಂಬರ್ 18 ರಂದು ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 64 ಕಡತಗಳನ್ನು ಬಹಿರಂಗಪಡಿಸಿತ್ತು. ಅಷ್ಟೇ ಅಲ್ಲದೆ ಮೋದಿ ಸರ್ಕಾರ ಸಹ 2015ರ ಜನವರಿಯಲ್ಲಿ ನೇತಾಜಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಬಹಿರಂಗಪಡಿಸಿತ್ತು. ಆದರೆ ಈ ಯಾವ ದಾಖಲೆಗಳಲ್ಲೂ ತೈವಾನ್'ನಲ್ಲಿ 1945ರ ಆಗಸ್ಟ್ 18ರಂದು ನಡೆದ ವಿಮಾನ ದುರಂತದಲ್ಲಿ ಸುಭಾಶ್ ಚಂದ್ರ ಬೋಸ್ ಅವರು ಸಾವನ್ನಪ್ಪಿದರು ಎಂಬುದನ್ನು ಪುಷ್ಟೀಕರಿಸುವಂತಹ ಯಾವ ಮಾಹಿತಿಯಾಗಲೀ ಅಥವಾ ನೂತನ ದಾಖಲೆಗಳಾಗಲೀ ಲಭ್ಯವಾಗಿಲ್ಲ.