ನವದೆಹಲಿ: ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿರುವ ಸ್ವಾವಲಂಬನೆ ಪ್ಯಾಕೇಜ್ ಅನ್ನು ಟೀಕಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು, ರೈತರು ಮತ್ತು ವಲಸೆ ಕಾರ್ಮಿಕರಿಗೆ ಹಣ ಬೇಕೇ ಹೊರತು ಸಾಲಗಳಲ್ಲ ಎಂದು ತಿಳಿಸಿದ್ದು  ಕೊರೊನಾವೈರಸ್ (Coronavirus)  COVID-19 ಆರ್ಥಿಕ ಉತ್ತೇಜನ ಪ್ಯಾಕೇಜ್ ಅನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಖಾಲಿ ಹೊಟ್ಟೆಯೊಂದಿಗೆ ತಮ್ಮ ಊರುಗಳಿಗೆ ನಡೆದುಕೊಂಡು ಹೋಗುತ್ತಿರುವ ವಲಸೆ ಕಾರ್ಮಿಕರು, ರೈತರು, ಸಣ್ಣ ಉದ್ಯಮಿಗಳು ಮತ್ತು ಇತರ ಜನರಿಗೆ ಸಾಲಕ್ಕಿಂತ ಮುಖ್ಯವಾಗಿ ಹಣದ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.


ಇಂದು ನಮ್ಮ ಜನರಿಗೆ ಹಸಿವು ನೀಗಿಸಲು ಹಣ ಬೇಕು. ಹಾಗಾಗಿ ಪ್ರಧಾನಿ ತಾವು ಘೋಷಿಸಿರುವ ಸಾಲದ ಪ್ಯಾಕೇಜ್ ಅನ್ನು ಮರುಪರಿಶೀಲಿಸಬೇಕು. ನೇರ ನಗದು ವರ್ಗಾವಣೆ, ಎಂಎನ್‌ಆರ್‌ಇಜಿಎ ಅಡಿಯಲ್ಲಿ 200 ಕೆಲಸದ ದಿನಗಳ ಭರವಸೆ, ರೈತರಿಗೆ ಹಣ ಇತ್ಯಾದಿಗಳ ಬಗ್ಗೆ ಯೋಚಿಸಬೇಕು. ಏಕೆಂದರೆ ಅವರೆಲ್ಲರೂ ಭಾರತದ ಭವಿಷ್ಯ ಎಂದು ಪತ್ರಕರ್ತರೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂವಹನ ನಡೆಸಿದ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. 


ಬಡ ಮತ್ತು ದುರ್ಬಲ ವರ್ಗದವರ ಖಾತೆಗಳಿಗೆ ಹಣವನ್ನು ಹಾಕುವ ಮೂಲಕ ಬೇಡಿಕೆ ಹುಟ್ಟಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ರಾಹುಲ್ ಗಾಂಧಿ ಅವರು, ನಾನು ಫೆಬ್ರವರಿಯಲ್ಲಿಯೇ ಇದರ ಬಗ್ಗೆ ಎಚ್ಚರಿಕೆ ನೀಡಿದ್ದೆ. ಈಗ ಇದರ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ. ಮುಂಬರುವ ಆರ್ಥಿಕ ಚಂಡಮಾರುತವನ್ನು ಹೇಗೆ ನಿಭಾಯಿಸುವುದು ಹೇಗೆ ಎಂಬುದನ್ನು ಯೋಚಿಸುವ ಸಮಯವಿದು ಎಂದು ತಿಳಿಸಿದರು.


ಕರೋನಾವೈರಸ್  ಕೋವಿಡ್ -19 (Covid-19) ಆರ್ಥಿಕತೆಗೆ ಸಂಬಂಧಿಸಿದಂತೆ ದೊಡ್ಡ ಹೊಡೆತವನ್ನು ಉಂಟು ಮಾಡಲಿದೆ. ಚಂಡಮಾರುತ ಇನ್ನೂ ಬಂದಿಲ್ಲ. ಅದು ಬರುತ್ತಿದೆ ಮತ್ತು ದೊಡ್ಡ ಆರ್ಥಿಕ ಹಾನಿಯನ್ನುಂಟು ಮಾಡಲಿದೆ. ಲಕ್ಷಾಂತರ ಜನರು ಇದರ ಪ್ರಭಾವವನ್ನು ಎದುರಿಸಬೇಕಿದೆ ಎಂದು ರಾಹುಲ್ ಗಾಂಧಿ ಅವರು ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದರು. 


ಹಳೆಯ ಮತ್ತು ದುರ್ಬಲ ಜನಸಂಖ್ಯೆಯನ್ನು ರೋಗಕ್ಕೆ ತ್ಯಾಗ ಮಾಡದೆ ಲಾಕ್‌ಡೌನ್ ಅನ್ನು ಬುದ್ಧಿವಂತಿಕೆಯಿಂದ ಎತ್ತುವುದು ಮುಖ್ಯ ಎಂದು ರಾಹುಲ್ ಗಾಂಧಿ ಅವರು ಇದೇ ವೇಳೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು.


ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಸಾಕಷ್ಟು ಹಣ ದೊರೆಯುತ್ತಿಲ್ಲ ಎಂಬ ಬಗ್ಗೆ ದೂರುಗಳಿವೆ. ರಾಜ್ಯ ಸರ್ಕಾರಗಳು ಈ ಯುದ್ಧದ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರದ ಸೂಕ್ತ ಬೆಂಬಲ ಅತ್ಯಗತ್ಯ ಎಂದು ನಾನೂ ಭಾವಿಸುತ್ತೇನೆ. ಮಹಾರಾಷ್ಟ್ರವು ಭಾರತದ ಆರ್ಥಿಕತೆಯ ಕೇಂದ್ರವಾಗಿದೆ ಮತ್ತು ಈ ಸಮಯದಲ್ಲಿ ಅದನ್ನು ಬೆಂಬಲಿಸ ಬೇಕಾಗಿದೆ. ಜೊತೆಗೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳನ್ನು ಅಗತ್ಯ ನೆರವು ಒದಗಿಸುವುದರೊಂದಿಗೆ ಬೆಂಬಲಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.