ದೇಶದ ಜನ ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ: ಸಂಸದರಿಗೆ ಪ್ರಧಾನಿ ಮೋದಿ ಕಿವಿಮಾತು
ಸಂಸತ್ತಿನಲ್ಲಿ ಗೌರವಯುತವಾಗಿ ನಡೆದುಕೊಂಡು ರಚನಾತ್ಮಕ ಚರ್ಚೆ ನಡೆಸಿ ಉತ್ತಮ ಆಡಳಿತವನ್ನು ಜನತೆಗೆ ನೀಡೋಣ ಎಂದು ಮೋದಿ ಹೇಳಿದ್ದಾರೆ.
ನವದೆಹಲಿ: ಅಧಿಕಾರಕ್ಕೆ ಬಂದಾಗಿನಿಂದ ಇದೇ ಮೊದಲಬಾರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅವಿಶ್ವಾಸ ನಿರ್ಣಯ ಪರೀಕ್ಷೆ ಎದುರಿಸಲಿದೆ. ಈ ಪರೀಕ್ಷೆಯಲ್ಲಿ ಗೆಲ್ಲುವ ವಿಶ್ವಾಸ ಬಿಜೆಪಿಗೆ ಇದ್ದರೂ ಸಹ, ಲೋಕಸಭೆ ಕಲಾಪದವನ್ನು ದೇಶದ ಜನತೆ ಸೂಕ್ಷ್ಮವಾಗಿ ಗಮನಿಸಲಿದ್ದಾರೆ. ಇಡೀ ಸೇಶದ ಕಣ್ಣು ಸಂಸತ್ತಿನ ಮೇಲಿದೆ ಎಂದು ಮೋದಿ ಸಂಸದರಿಗೆ ಕಿವಿ ಮಾತು ಹೇಳಿದ್ದಾರೆ.
ಈ ಬಗ್ಗೆ ಶುಕ್ರವಾರ ಟ್ವೀಟ್ ಬೆಳಿಗ್ಗೆ ಮಾಡಿರುವ ಮೋದಿ, "ಇಂದು ನಮ್ಮ ಸಂಸತ್ತಿನ ಪ್ರಜಾಪ್ರಭುತ್ವದಲ್ಲಿ ಮಹತ್ವದ ದಿನ. ಈ ಸಂದರ್ಭದಲ್ಲಿ ನನ್ನ ಸಂಸದ ಸಹೋದ್ಯೋಗಿಗಳು ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ. ಇಲ್ಲಿ ರಚನಾತ್ಮಕ, ಸಮಗ್ರ ಮತ್ತು ಮುಕ್ತ ಚರ್ಚೆ ನಡೆಯುತ್ತದೆ ಎಂದು ಭಾವಿಸುತ್ತೇನೆ. ಸಂಸತ್ತಿನಲ್ಲಿ ಗೌರವಯುತವಾಗಿ ನಡೆದುಕೊಂಡು ರಚನಾತ್ಮಕ ಚರ್ಚೆ ನಡೆಸಿ ಉತ್ತಮ ಆಡಳಿತವನ್ನು ಜನತೆಗೆ ನೀಡೋಣ, ಆ ಮೂಲಕ ಸಂವಿಧಾನವನ್ನು ರಚಿಸಿದವರಿಗೆ ಗೌರವ ಸಲ್ಲಿಸೋಣ, ದೇಶದ ಜನತೆ ನಮ್ಮನ್ನು ಬಹಳ ಹತ್ತಿರದಿಂದ ಗಮನಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಬಳಿಕ ನಿರ್ಣಯದ ಬಗ್ಗೆ ದೀರ್ಘ ಚರ್ಚೆ ನಡೆಯಲಿದ್ದು, ಸಂಸದರು ತಮ್ಮ ಸಂಯಮ ಕಾಪಾಡಿಕೊಂಡು ಮಾತನಾಡಬೇಕು. ಯಾವುದೇ ಸಂದರ್ಭದಲ್ಲಿಯೂ ಜನರ ಟೀಕೆಗೆ ಗುರಿಯಾಗುವಂತಹ, ಗೊಂದಲದ ಮಾತುಗಳನ್ನು ಆಡಬಾರದು ಎಂದು ಸಂಸದರಿಗೆ ಮೋದಿ ಕಿವಿಮಾತು ಹೇಳಿದ್ದಾರೆ.
ಇಂದು ಬೆಳಿಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯಾಗಲಿದೆ. ಇದಾದ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚರ್ಚೆ ಆರಂಭಿಸಿ ಮಾತನಾಡಲಿದ್ದಾರೆ. ಒಟ್ಟು ಏಳು ಗಂಟೆಗಳ ಕಾಲ ಗೊತ್ತುವಳಿಯ ಬಗ್ಗೆ ಚರ್ಚೆ ನಡೆಯಲಿದೆ. ನಿಲುವಳಿಯ ಬಗ್ಗೆ ಎಲ್ಲ ಪಕ್ಷಗಳು ತಮ್ಮ ಸದಸ್ಯರಿಗೆ ಈಗಾಗಲೇ ವಿಪ್ ಜಾರಿ ಮಾಡಿವೆ. ಆಡಳಿತರೂಢ ಬಿಜೆಪಿ ಕೂಡ ಈಗಾಗಲೇ ತನ್ನ ಮಿತ್ರ ಪಕ್ಷಗಳನ್ನು ಸಂಪರ್ಕಿಸಿ ಅವಿಶ್ವಾಸ ನಿಲುವಳಿಯ ವಿರುದ್ಧ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡಿದೆ.