ನವದೆಹಲಿ: ಕೇಂದ್ರ ಗೃಹ ಸಚಿವಾಲಯಕ್ಕೆ ಗುಪ್ತಚರ ಇಲಾಖೆ ವರದಿಯೊಂದನ್ನು ನೀಡಿದ್ದು, ವರದಿಯ ಪ್ರಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಂದರೆ PFI ಹಾಗೂ SDPI ಸಂಘಟನೆಗಳು CAA ಹಾಗೂ NRC ಕಾಯದೆಗಳನ್ನು ವಿರೋಧಿಸಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿವೆ ಎನ್ನಲಾಗಿದೆ. SDPI ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ರಾಜಕೀಯ ವಿಂಗ್ ಆಗಿದೆ.


COMMERCIAL BREAK
SCROLL TO CONTINUE READING

ಗುಪ್ತಚರ ಇಲಾಖೆಗೆ ಬಂದ ಮಾಹಿತಿ ಪ್ರಕಾರ PFI ಸುಮಾರು 5000ಕ್ಕೂ ಅಧಿಕ ಸ್ಥಾನಗಳಲ್ಲಿ CAA, NPR ಹಾಗೂ NRC ಕಾಯ್ದೆಗಳ ವಿರುದ್ಧ ಧರಣಿ ಸತ್ಯಾಗ್ರಹ ನಡೆಸಿ ಮನೆ-ಮನೆಗೂ ತೆರಳಿ ಜಾಗೃತಿ ಮೂಡಿಸಲು ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ.


ವರದಿಯ ಪ್ರಕಾರ 'ಕಾಗಜ್ ನಹಿ ದಿಖಾಯೆಂಗೆ' ಹೆಸರಿನ ಅಡಿ ನಡೆಸಲಾಗುತ್ತಿರುವ ಈ ಪ್ರತಿಭಟನೆಯ ಮೂಲಕ ಜನರನ್ನು ರೊಚ್ಚಿಗೆಬ್ಬಿಸಲಾಗುತ್ತಿದ್ದು, ನ್ಯಾಷನಲ್ ಪಾಪ್ಯುಲೇಶನ್ ರಿಜಿಸ್ಟರ್ ಗಾಗಿ ನಡೆಸಲಾಗುತ್ತಿರುವ ಜನಗಣತಿಯ ವೇಳೆ ತಮ್ಮ ಗುರುತಿನ ಕುರಿತು ಯಾರೂ ದಾಖಲೆಗಳನ್ನು ನೀಡಬಾರದು ಎಂದು ಹೇಳಲಾಗುತ್ತಿದೆ ಎನ್ನಲಾಗಿದೆ.


ಅಷ್ಟೇ ಅಲ್ಲ ಇದೀಗ ಈ ಪ್ರತಿಭಟನೆಯ ಪ್ರಭಾವ ಕಂಡುಬರಲಾರಂಭಿಸಿದ್ದು, ಕರ್ನಾಟಕ ಹಾಗೂ ಆಂಧ್ರಪ್ರದೇಶದ ಹಲವು ಪ್ರದೇಶಗಳಲ್ಲಿನ ಮುಸ್ಲಿಮರು ಸರ್ಕಾರಿ ಅಧಿಕಾರಿಗಳಿಗೆ ತಮ್ಮ ಸಹಕಾರ ನೀಡುತ್ತಿಲ್ಲ ಎಂದೂ ಕೂಡ ವರದಿಯಲ್ಲಿ ಹೇಳಲಾಗಿದೆ.


ಕಳೆದ ಮೂರು ದಿನಗಳಲ್ಲಿ ಸುಮಾರು 2300 ಪ್ರದೇಶಗಳಲ್ಲಿ ಮುಸ್ಲಿಮರು ಧರಣಿ ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ. ಇವುಗಳಲ್ಲಿ ಕೇರಳದಲ್ಲಿ 587, ಪಶ್ಚಿಮ ಬಂಗಾಳದಲ್ಲಿ 221, ಉತ್ತರಪ್ರದೇಶದಲ್ಲಿ 202, ತಮಿಳುನಾಡಿನಲ್ಲಿ 221, ಮಹಾರಾಷ್ಟ್ರದಲ್ಲಿ 201, ಆಂಧ್ರಪ್ರದೇಶದ 118, ತೆಲಂಗಾಣದ 105, ಕರ್ನಾಟಕದ 100, ರಾಜಸ್ಥಾನದ 87, ದೆಹಲಿಯ 77, ಮಧ್ಯಪ್ರದೇಶದ 71, ಗುಜರಾತ್ ನ 48 ಹಾಗೂ ಬಿಹಾರದಲ್ಲಿ ಇದುವರೆಗೆ 45 ಸ್ಥಾನಗಳಲ್ಲಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿವೆ ಎನ್ನಲಾಗಿದೆ.