ನವದೆಹಲಿ: ಇತ್ತೀಚೆಗಷ್ಟೇ ಹಣಕಾಸು ಇಲಾಖೆಯ ಹೊಣೆಗಾರಿಕೆಯನ್ನು ಹೆಚ್ಚುವರಿಯಾಗಿ ವಹಿಸಿಕೊಂಡಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್ ಕೇಂದ್ರ ಸರ್ಕಾರದ ಕಡೆಯ ಬಜೆಟ್ ಅನ್ನು ಶುಕ್ರವಾರ ಮಂಡಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಕೇಂದ್ರ ಹಣಕಾಸು ಸಚಿವ ಅರುಣ್ ಜೈಟ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗಾಗಿ‌ ನ್ಯೂಯಾರ್ಕ್ ಗೆ ತೆರಳಿದ್ದರಿಂದ ಹಣಕಾಸು ಇಲಾಖೆಯನ್ನು‌ ಹೆಚ್ಚುವರಿಯಾಗಿ ಪಿಯೂಷ್ ಗೋಯಲ್ ಅವರಿಗೆ ನೀಡಲಾಗಿದೆ. ಹಾಗಾಗಿ ಈ ಭಾರಿ ಪಿಯೂಷ್ ಗೋಯಲ್ ಬಜೆಟ್ ಮಂಡಿಸುತ್ತಿದ್ದು, ಈ ಮಧ್ಯಂತರ ಬಜೆಟ್​ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚಿನ ಪರಿಹಾರ ನೀಡುವ ನಿರೀಕ್ಷೆಯಿದೆ. ಆದಾಯ ತೆರಿಗೆ ಮಿತಿ ದ್ವಿಗುಣಗೊಳ್ಳುವ ಬಗ್ಗೆ ನಿರೀಕ್ಷಿಸಲಾಗುತ್ತಿದೆ. ಅಸ್ತಿತ್ವದಲ್ಲಿರುವ ಆದಾಯ ತೆರಿಗೆ ಮಿತಿಯನ್ನು ಸರ್ಕಾರ 5 ಲಕ್ಷ ರೂಪಾಯಿಗೆ ಅಧಿಕಗೊಳಿಸಬಹುದು ಎಂದು ಹೇಳಲಾಗುತ್ತಿದೆ.


ಕೇಂದ್ರ ಸರ್ಕಾರದ ವಾರ್ಷಿಕ ಹಣಕಾಸು ಯೋಜನೆಯ ಮಾರ್ಗಸೂಚಿಯನ್ನೇ ಪೂರ್ಣ ಪ್ರಮಾಣದ ಬಜೆಟ್ ಎಂದು ಕರೆಯಲಾಗುತ್ತದೆ​​. ಯಾವ ಮೂಲದಿಂದ ಆದಾಯ ಬರುತ್ತದೆ? ಅದನ್ನು ಯಾವ ಕ್ಷೇತ್ರಕ್ಕೆ ವಿನಿಯೋಗ ಮಾಡಬೇಕು? ಎಂಬುದರ ಬಗ್ಗೆ ವಿವರಣೆ ನೀಡಲಾಗುತ್ತದೆ. ಅಲ್ಲದೇ ಹೊಸ ತೆರಿಗೆ ಪ್ರಸ್ತಾಪ, ನೂತನ ಯೋಜನೆಗಳ ಘೋಷಿಸಲಾಗುತ್ತದೆ. ಅವಧಿ ಪೂರೈಸುವ ಮುನ್ನ ಯಾವುದೇ ಸರ್ಕಾರವಾಗಿರಲಿ ಮುಂದಿನ ನಾಲ್ಕು ತಿಂಗಳ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಸಂಸತ್ತಿನ ಅನುಮೋದನೆ ಪಡೆಯಬೇಕಾಗುತ್ತದೆ. ಅದರಲ್ಲಿ ಯಾವುದೇ ಹೊಸ ತೆರಿಗೆ ಮತ್ತು ಹೊಸ ಘೋಷಣೆಗಳನ್ನು ಪ್ರಕಟಿಸಲು ಅವಕಾಶ ಇಲ್ಲ. ವೇತನ ಪಾವತಿ ಸೇರಿದಂತೆ ಯಾವುದೇ ಯೋಜನೆಗಳಿಗೆ ನೀಡಲಾಗುವ ವೆಚ್ಚದ ಪ್ರಮಾಣ ಮುಂದುವರಿಸಲು ಸಂಸತ್​​ ಅನುಮತಿ ಅಗತ್ಯವಾಗಿರುತ್ತದೆ. ಇದುವೇ ಕೇಂದ್ರದ ಮಧ್ಯಂತರ ಬಜೆಟ್​​ ಆಗಿರುತ್ತದೆ.