ನೂತನ ಸಿಬಿಐ ಡೈರಕ್ಟರ್ ನೇಮಕಕ್ಕೆ ಜ.24ರಂದು ಪಿಎಂ ನೇತೃತ್ವದ ಸಮಿತಿ ಸಭೆ
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಹೊಸ ಸಿಬಿಐ ನಿರ್ದೇಶಕನನ್ನು ನೇಮಕ ಮಾಡಲು ಜನವರಿ 24 ರಂದು ಸಭೆ ಸೇರಲಿದೆ.ಈ ಸಭೆಯಲ್ಲಿ ಸಮಿತಿ ಇತರ ಸದಸ್ಯರಾದ ಮಲ್ಲಿಕಾರ್ಜುನ್ ಖರ್ಗೆ, ಮುಖ್ಯ ನ್ಯಾಯಮೂರ್ತಿ ಇರಲಿದ್ದಾರೆ.
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಹೊಸ ಸಿಬಿಐ ನಿರ್ದೇಶಕನನ್ನು ನೇಮಕ ಮಾಡಲು ಜನವರಿ 24 ರಂದು ಸಭೆ ಸೇರಲಿದೆ.ಈ ಸಭೆಯಲ್ಲಿ ಸಮಿತಿ ಇತರ ಸದಸ್ಯರಾದ ಮಲ್ಲಿಕಾರ್ಜುನ್ ಖರ್ಗೆ, ಮುಖ್ಯ ನ್ಯಾಯಮೂರ್ತಿ ಇರಲಿದ್ದಾರೆ.
ಈ ಸಭೆಯನ್ನು ಜನವರಿ 21 ರಂದು ನಡೆಸಲು ಸರಕಾರ ಪ್ರಸ್ತಾಪಿಸಿತ್ತು. ಆದರೆ ಖರ್ಗೆ ಅವರು ಜನವರಿ 24 ಅಥವಾ 25 ರಂದು ಸಭೆ ನಡೆಸಬೇಕೆಂದು ಹೇಳಿದರು.ಈಗ ಒಮ್ಮತದ ಮೇರೆಗೆ ಜನವರಿ 24 ರಂದು ಸಭೆ ಸೇರುವುದಾಗಿ ಸಮಿತಿ ಹೇಳಿದೆ.
ಸದ್ಯ ಐಪಿಎಸ್ ಅಧಿಕಾರಿ ಎಂ.ನಾಗೇಶ್ವರ ರಾವ್ ಅವರು ಸಿಬಿಐನ ಮಧ್ಯಂತರ ನಿರ್ದೇಶಕರಾಗಿದ್ದಾರೆ. ಪೂರ್ಣಾವಧಿ ಸಿಬಿಐ ನಿರ್ದೇಶಕರನ್ನು ನೇಮಕ ಮಾಡದೆ ಇರುವುದಕ್ಕೆ ಇನ್ನೊಂದೆಡೆ ಕಾಂಗ್ರೆಸ್ ಸೇರಿದಂತೆ ಪ್ರತಿ ಪಕ್ಷಗಳು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿವೆ. ಪೂರ್ಣಾವಧಿ ನಿರ್ದೇಶಕರನ್ನು ನೇಮಕ ಮಾಡಲು ಪ್ರಧಾನಿಗೆ ಮಲ್ಲಿಕಾರ್ಜುನ್ ಖರ್ಗೆ ಕೂಡ ಪತ್ರವನ್ನು ಬರೆದಿದ್ದಾರೆ.
ನಾಗೇಶ್ವರರಾವ್ ಅವರು ಈಗಾಗಲೇ ಎರಡನೇ ಬಾರಿ ಹಂಗಾಮಿ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. 1986 ರ ಬ್ಯಾಚ್ ಓಡಿಸ್ಸಾ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ರಾವ್ ಅಲೋಕ್ ವರ್ಮಾ ರಂತರ ಅವರನ್ನು ಹಂಗಾಮಿ ನಿರ್ದೇಶಕರನ್ನಾಗಿ ಸರ್ಕಾರ ನೇಮಕ ಮಾಡಿತ್ತು,ಇದರಿಂದ ಪ್ರತಿಪಕ್ಷಗಳು ಸರ್ಕಾರದ ನಡೆಗೆ ಅಸಮಾಧಾನಗೊಂಡಿದ್ದವು.