ನವದೆಹಲಿ: ಮಹಾಬಲಿಪುರಂ ರಾಜತಾಂತ್ರಿಕತೆಯ ಹೊರತಾಗಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕವಿ ರೂಪ ಕಾಣಿಸಿಕೊಂಡಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಳಿಗ್ಗೆ ಸಮುದ್ರ ತೀರದಲ್ಲಿ ನಡೆದಾಡುವಾಗ ಸಮುದ್ರದ ಅಲೆಗಳೊಂದಿಗೆ ಸಂವಹನ ನಡೆಸುವ ಕವಿತೆಯೊಂದನ್ನು ಬರೆದಿದ್ದು, ಈ ಕವಿತೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪಿಎಂ ಮೋದಿ ಅವರ ಕವಿತೆ ಬರೆಯುವ ಹವ್ಯಾಸ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಪಿಸುತ್ತಿದೆ. ಬಿಜೆಪಿಯ ಹಿರಿಯ ನಾಯಕ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರನ್ನು ರಾಜಕಾರಣಿಯಾಗಿ ಮಾತ್ರವಲ್ಲದೆ, ಕಾಲಕಾಲಕ್ಕೆ ಕವಿತೆಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದ ಅವರನ್ನು ಸೂಕ್ಷ್ಮ ಕವಿ ಎಂದು ಗುರುತಿಸಲಾಗಿದೆ. 


COMMERCIAL BREAK
SCROLL TO CONTINUE READING

ಅದೇ ಹೆಜ್ಜೆಯನ್ನು ಅನುಸರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾವ್ಯದ ಮೂಲಕ ಮತ್ತೊಮ್ಮೆ ತಮ್ಮ ಭಾವನೆಗಳನ್ನು ಕಾವ್ಯಾತ್ಮಕ ರೂಪದಲ್ಲಿ ವ್ಯಕ್ತಪಡಿಸಿದರು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ನಡೆದ ಶೃಂಗಸಭೆ ಸಭೆ ಸಂಬಂಧ ಐತಿಹಾಸಿಕ ಮಹಾಬಲಿಪುರಂಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಕಡಲತೀರದಲ್ಲಿ ನಡೆಯುವಾಗ, ಸಮುದ್ರದ ಸೌಂದರ್ಯ ಮತ್ತು ಅದರಲ್ಲಿ ಅಡಗಿರುವ ಜೀವನ ದೃಷ್ಟಿಯನ್ನು ಅನ್ವೇಷಿಸಿ ಕಾವ್ಯ ಬರೆದಿದ್ದಾರೆ. ಈ ಕವಿತೆಯನ್ನು ಪ್ರಧಾನಿ ಮೋದಿ ಭಾನುವಾರ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಕೂಡಲೇ ಅವರ ಕವನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.



ಅಂದಹಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಕವಿತೆ ಬರೆದಿರುವುದು ಇದೇ ಮೊದಲೇನಲ್ಲ. ಅವರಿಗೆ ಕವನಗಳು ಮತ್ತು ಸಾಹಿತ್ಯದೊಂದಿಗೆ ಮೊದಲಿನಿಂದಲೂ ಒಡನಾಟವಿದೆ. ಇಲ್ಲಿಯವರೆಗೆ ದೇಶ, ಸಮಾಜ, ಪರಿಸರ, ಪ್ರೀತಿ, ಹಲವು ನಾಯಕರು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮೋದಿಯವರು ಬರೆದ 11 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಅವುಗಳಲ್ಲಿ, ಗುಜರಾತಿ ಭಾಷೆಯಲ್ಲಿ ಬರೆದ ಕವನ ಸಂಕಲನ - 'ಆಂಖ್ ಅ ಧನ್ಯ ಚೇ'(Eyes are blessed) ಪ್ರಮುಖವಾಗಿದೆ. ಇದರಲ್ಲಿ ಮೋದಿಯ 67 ಕವನಗಳಿವೆ. ಅವರ ಗುಜರಾತಿ ಕವಿತೆಗಳ ಹಿಂದಿ ಅನುವಾದವನ್ನು ಮಧ್ಯಪ್ರದೇಶದ ಬಿಜೆಪಿ ಪತ್ರಿಕೆ 'ಚರೈವೇತಿ' ಯಲ್ಲಿ ಪ್ರಕಟಿಸಲಾಗಿದೆ.


ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮಧ್ಯಾಹ್ನ 2.30 ರ ಸುಮಾರಿಗೆ ಹಂಚಿಕೊಂಡಿದ್ದು, "ನಿನ್ನೆ ಮಹಾಬಲಿಪುರಂನಲ್ಲಿ, ನಾನು ಸಮುದ್ರದ ಉದ್ದಕ್ಕೂ ನಡೆದು ಸಮುದ್ರದಲ್ಲಿ ಕಳೆದುಹೋದೆ. ಈ ಸಂಭಾಷಣೆ ನನ್ನ ಆತ್ಮ ಜಗತ್ತು. ನಾನು ಈ ಸಂವಾದ ಸಂದೇಶವನ್ನು ನಿಮ್ಮೊಂದಿಗೆ ಪದಗಳ ಮೂಲಕ ಹಂಚಿಕೊಳ್ಳುತ್ತಿದ್ದೇನೆ" ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.


2015 ರಲ್ಲಿ, ಕವನ ಸಂಕಲನವನ್ನು 'ಸಾಕ್ಷಿ ಭವ' ಹೆಸರಿನಲ್ಲಿ ಪ್ರಕಟಿಸಲಾಗಿದೆ, ಇದರಲ್ಲಿ ತಾಯಿಯೊಂದಿಗೆ ಸಂವಹನ ನಡೆಸುವ ಅವರ ಕವಿತೆಗಳಿವೆ. ಅವರ ಪುಸ್ತಕಗಳನ್ನು 'ಸಾಮಾಜಿಕ ಸಾಮರಸ್ಯ', 'ಜ್ಯೋತಿಪುಂಜ್' ಹೆಸರಿನಲ್ಲಿ ಪ್ರಕಟಿಸಲಾಗಿದೆ. ಮಕ್ಕಳಿಗೆ ಪರೀಕ್ಷೆಯ ಒತ್ತಡದಿಂದ ಮುಕ್ತವಾಗುವ ಬಗ್ಗೆ 2018 ರಲ್ಲಿ ಪ್ರಕಟವಾದ ಅವರ 'ಪರೀಕ್ಷಾ ವಾರಿಯರ್ಸ್' ಪುಸ್ತಕವು ಹೆಚ್ಚು ಸುದ್ದಿಯಲ್ಲಿತ್ತು.