ಮನ್ ಕಿ ಬಾತ್: ಪದ್ಮಶ್ರೀ ಪುರಸ್ಕೃತೆ ಸೂಲಗಿತ್ತಿ ನರಸಮ್ಮಗೆ ಪ್ರಧಾನಿ ಮೋದಿ ನಮನ
ನರಸಮ್ಮನವರು ಸಾವಿರಾರು ತಾಯಂದಿರ ಮಹಾತಾಯಿ. ಅವರು ಅದೆಷ್ಟೋ ಗ್ರಾಮೀಣ ತಾಯಂದಿರ ಹೆರಿಗೆ ವೇಳೆ ಮಹಾತಾಯಿ ಆಗಿ ನಿಂತು ಸೇವೆ ಮಾಡಿದ್ದಾರೆ ಎಂದು ಮೋದಿ ಹೊಗಳಿದರು.
ನವದೆಹಲಿ: ಇಂದು ಪ್ರಸಾರವಾದ 51ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ನಿಧನರಾದ ಕರ್ನಾಟಕದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಿಳೆ ಸೂಲಗಿತ್ತಿ ನರಸಮ್ಮ ಅವರ ಸಾಧನೆ ಬಗ್ಗೆ ಶ್ಲಾಘಿಸಿ ನಮನ ಸಲ್ಲಿಸಿದರು.
ಭಾಷಣದ ಆರಂಭದಲ್ಲಿ ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ಪ್ರಧಾನಿ ಮೋದಿ, ಬಳಿಕ ಸರಸಮ್ಮ ಅವರ ವಿಚಾರ ಪ್ರಸ್ತಾಪಿಸಿದರು. ನರಸಮ್ಮನವರು ಸಾವಿರಾರು ತಾಯಂದಿರ ಮಹಾತಾಯಿ. ಅವರು ಅದೆಷ್ಟೋ ಗ್ರಾಮೀಣ ತಾಯಂದಿರ ಹೆರಿಗೆ ವೇಳೆ ಮಹಾತಾಯಿ ಆಗಿ ನಿಂತು ಸೇವೆ ಮಾಡಿದ್ದಾರೆ. ಹೀಗಾಗಿ ಇವರಿಗೆ ಕರ್ನಾಟಕದಲ್ಲಿ ವಿಶೇಷ ಸ್ಥಾನವಿತ್ತು. ಅಲ್ಲದೇ, ಇವರ ಸೇವೆಯನ್ನ ಪರಿಗಣಿಸಿ ಪದ್ಮಶ್ರೀ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು. ಇತರರಿಗೆ ಪ್ರೇರಿತವಾಗುವಂತಹ ವ್ಯಕ್ತಿತ್ವ ಹೊಂದಿದ್ದ ನರಸಮ್ಮನವರು, ಸಮಾಜಕ್ಕೆ ದೊಡ್ಡ ಮಟ್ಟದಲ್ಲಿ ತಮ್ಮ ಸೇವೆಯನ್ನ ಅರ್ಪಿಸಿದ್ದಾರೆ ಎಂದು ನರಸಮ್ಮರ ಸೇವೆಯನ್ನು ಕೊಂಡಾಡಿದರು.
ಅಷ್ಟೇ ಅಲ್ಲದೆ, ಡಿಸೆಂಬರ್ ನಲ್ಲಿ ನಿಧನರಾದ ಡಾ.ಜಯಾಚಂದ್ರನ್ ಅವರನ್ನೂ ಸಹ ಪ್ರಧಾನಿ ನರೇಂದ್ರ ಮೋದಿ ನೆನೆದರು.