ನವದೆಹಲಿ: ಕೊರೊನಾ ಕಷ್ಟದ ನಡುವೆಯೇ ಅಂಫಾನ್ ಚಂಡಮಾರುತ ‌(Cyclone Amphan) ಬಂದು ಅಪ್ಪಳಿಸಿರುವ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.


COMMERCIAL BREAK
SCROLL TO CONTINUE READING

ಅಂಫಾನ್ ಚಂಡಮಾರುತ (Cyclone) ‌ಅಪ್ಪಳಿಸಲಿದೆ ಎಂಬ ಸುಳಿವಿನ‌ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಬಹಳಷ್ಟು ಮುನ್ನೆಚ್ಚರಿಕೆ ವಹಿಸಲಾಗಿತ್ತು. ಲಕ್ಷಾಂತರ ಜನರನ್ನು ಬಂಗಾಳಕೊಲ್ಲಿಯ ಕಿನಾರೆಯಿಂದ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಆದರೂ ಗಂಟೆಗೆ 190 ಕಿಲೋ ಮೀಟರ್ ವೇಗದಲ್ಲಿ ಬಂದು ಅಪ್ಪಳಿಸಿದ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ರಾಜ್ಯಗಳು ಅಕ್ಷರಶಃ ನಲುಗಿಹೋಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಪಶ್ಚಿಮ ಬಂಗಾಳ ಮತ್ತು ಒರಿಸ್ಸಾ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ.


ಬೆಳಿಗ್ಗೆ 10.30ಕ್ಕೆ ಕೊಲ್ಕತ್ತಾಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ ಮೊದಲು‌ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸೇರಿ ಪಶ್ಚಿಮ ಬಂಗಾಳದಲ್ಲಿ ಚಂಡಮಾರುತಕ್ಕೆ ತುತ್ತಾಗಿರುವ ಉತ್ತರ ಮತ್ತು‌ ದಕ್ಷಿಣ ಕರಾವಳಿ ಭಾಗದ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.


ಪಶ್ಚಿಮ ಬಂಗಾಳದಿಂದ ಒರಿಸ್ಸಾಗೆ ತೆರಳಲಿರುವ ಪ್ರಧಾನಿ ಮೋದಿ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೊಂದಿಗೆ ಒರಿಸ್ಸಾದ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಮಾಡಲಿದ್ದಾರೆ.
ಇದೇ ವೇಳೆ ಎರಡೂ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳೊಂದಿಗೆ ಅಂಫಾನ್ ಚಂಡಮಾರುತ ಸೃಷ್ಟಿಸಿರುವ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.