ಸಾರ್ಕ್ ಶೃಂಗ ಸಭೆಗೆ ಪ್ರಧಾನಿ ಮೋದಿಗೆ ಆಹ್ವಾನ: ಪಾಕಿಸ್ತಾನ
ಇಸ್ಲಾಮಾಬಾದ್ ನಲ್ಲಿ ನಡೆದ ಸಮಾವೇಶವೊಂದರಲ್ಲಿ ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ಡಾ.ಮೊಹಮ್ಮದ್ ಫೈಸಲ್ ಈ ಮಾಹಿತಿ ನೀಡಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ ಸಾರ್ಕ್(ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ) ಶೃಂಗ ಸಭೆಗೆ ಆಹ್ವಾನಿಸಲಾಗುವುದು ಎಂದು ಪಾಕಿಸ್ತಾನ ವಿದೇಶಾಂಗ ಕಾರ್ಯಾಲಯ ತಿಳಿಸಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಇಸ್ಲಾಮಾಬಾದ್ ನಲ್ಲಿ ನಡೆದ ಸಮಾವೇಶವೊಂದರಲ್ಲಿ ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ಡಾ.ಮೊಹಮ್ಮದ್ ಫೈಸಲ್ ಈ ಮಾಹಿತಿ ನೀಡಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ ಕರ್ತಾಪುರ ಕಾರಿಡಾರ್ ಸಮಾರಂಭಕ್ಕೆ ಆಹ್ವಾನ ನೀಡಿದ ಬೆನ್ನಲ್ಲೇ, ಮೋದಿ ಅವರನ್ನು ಸಾರ್ಕ್ ಶೃಂಗ ಸಭೆಗೆ ಆಹ್ವಾನಿಸುವುದಾಗಿ ತಿಳಿದುಬಂದಿದೆ.
ಕಳೆದ ಬಾರಿ 2014 ರಲ್ಲಿ ಕಟ್ಮಂಡುನಲ್ಲಿ ನಡೆದ ಸಾರ್ಕ ಸೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಇನ್ನು, 2016ರ ಸಾರ್ಕ್ ಶೃಂಗ ಸಭೆ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ನಡೆಯಬೇಕಿತ್ತು. ಆದರೆ ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ಮೇಲೆ ಉಗ್ರರ ದಾಳಿ ನಂತರ ಭಾರತ ಸಾರ್ಕ್ ಶೃಂಗ ಸಭೆಯನ್ನು ಬಹಿಷ್ಕರಿಸಿತ್ತು. ಭಾರತದ ನಿರ್ಧಾರಕ್ಕೆ ಸದಸ್ಯ ರಾಷ್ಟ್ರಗಳಾದ ಬಾಂಗ್ಲಾದೇಶ, ಭೂತಾನ್ ಮತ್ತು ಅಘ್ಘಾನಿಸ್ತಾನ ಸಹ ಬೆಂಬಲ ಸೂಚಿಸಿದ್ದವು. ಹೀಗಾಗಿ ಪಾಕಿಸ್ತಾನದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ 19ನೇ ಸಾರ್ಕ್ ಶೃಂಗ ಸಭೆಯನ್ನು ಮುಂದೂಡಲಾಗಿತ್ತು.