ಭಾರತದ ಮೋಸ್ಟ್ ವಾಂಟೆಡ್ ವಂಚಕ ನೀರವ್ ಮೋದಿ ಲಂಡನ್ನಿನಲ್ಲಿ ಪ್ರತ್ಯಕ್ಷ!
ಭಾರತದ ಮೋಸ್ಟ್ ವಾಂಟೆಡ್ ವಜ್ರದ ವ್ಯಾಪಾರಿ ನೀರವ್ ಮೋದಿ ಲಂಡನ್ ನಲ್ಲಿ ಪತ್ತೆಯಾಗಿದ್ದು, 56 ಕೋಟಿ ರೂ. ಬೆಲೆಯ ಲಕ್ಷುರಿ ಅಪಾರ್ಟ್ಮೆಂಟ್ನಲ್ಲಿ ಜೀವನ ನಡೆಸುತ್ತಿದ್ದಾನೆ ಎಂದು ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ನವದೆಹಲಿ: ಭಾರತದಿಂದ ತಲೆಮರೆಸಿಕೊಂಡಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ವಜ್ರದ ವ್ಯಾಪಾರಿ ನೀರವ್ ಮೋದಿ ಲಂಡನ್ನಿನಲ್ಲಿ ಪ್ರತ್ಯಕ್ಷವಾಗಿದ್ದಾನೆ.
ಈ ಬಗ್ಗೆ ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದ್ದು, ಭಾರತದ ಮೋಸ್ಟ್ ವಾಂಟೆಡ್ ವಜ್ರದ ವ್ಯಾಪಾರಿ ನೀರವ್ ಮೋದಿ ಲಂಡನ್ ನಲ್ಲಿ ಪತ್ತೆಯಾಗಿದ್ದು, 56 ಕೋಟಿ ರೂ. ಬೆಲೆಯ ಲಕ್ಷುರಿ ಅಪಾರ್ಟ್ಮೆಂಟ್ನಲ್ಲಿ ಜೀವನ ನಡೆಸುತ್ತಿದ್ದಾನೆ ಎಂದು ತಿಳಿಸಿದೆ.
ಲಂಡನ್ ಸ್ಟ್ರೀಟ್ ನಲ್ಲಿ ಪಿಂಕ್ ಅಂಗಿ ತೊಟ್ಟು, ಕಪ್ಪು ಜಾಕೆಟ್ ಧರಿಸಿ, ಗಡ್ಡ ಬಿಟ್ಟು ನಡೆದುಕೊಂಡು ಹೋಗುತ್ತಿದ್ದ ನೀರವ್ ಮೋದಿಯನ್ನು ಗುರುತಿಸಿ ತಡೆದು ಮಾತಿಗೆಳೆದ ಟೆಲಿಗ್ರಾಫ್ ಪತ್ರಿಕೆ ಪ್ರತಿನಿಧಿಯ ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸಿದ ನೀರವ್ ಮೋದಿ 'ನೋ ಕಮೆಂಟ್ಸ್' ಎಂದು ಪ್ರತಿಕ್ರಿಯಿಸಿ ಅಲ್ಲಿಂದ ಬೇಗ ಕಾಲ್ಕಿತ್ತಿದ್ದಾರೆ. ಆ ವೀಡಿಯೋವನ್ನೂ ಸಹ ಪತ್ರಿಕೆ ಬಹಿರಂಗಪಡಿಸಿದೆ.
ಈಗಾಗಲೇ ಭಾರತದಲ್ಲಿ ಆತನ ಬ್ಯಾಂಕ್ ಖಾತೆಗಳನ್ನು ಅಧಿಕಾರಿಗಳು ಸ್ಥಗಿತಗೊಳಿಸಿ, ನೀರವ್ ಮೋದಿ ಬಂಧನಕ್ಕೆ ಭಾರತದ ಅಧಿಕಾರಿಗಳ ಕೋರಿಕೆ ಮೇರೆಗೆ ಇಂಟರ್ಪೋಲ್ ಈತನ ಮೇಲೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ್ದರೂ ಸಹ ಈತ ಲಂಡನ್ನಲ್ಲಿ ಐಷಾರಾಮಿಯಾಗಿ ಜೀವನ ಸಾಗಿಸುತ್ತಿದ್ದಾನೆ. ಅಲ್ಲದೆ, ಲಂಡನ್ನಿನಲ್ಲಿ ನೂತನ ವಜ್ರದ ಉದ್ಯಮದಲ್ಲಿ ತೊಡಗಿದ್ದಾನೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ವರದಿಯ ಪ್ರಕಾರ, ನೀರವ್ ಮೋದಿಗೆ ಲಂಡನ್ನಿನ ಉದ್ಯೋಗ ಮತ್ತು ಪಿಂಚಣಿ ಇಲಾಖೆಯಿಂದ ರಾಷ್ಟ್ರೀಯ ವಿಮೆ ಸಂಖ್ಯೆ ನಿದಲಾಗಿದ್ದು, ಆತ ಬ್ರಿಟನ್ ನಲ್ಲಿ ಕಾನೂನುಬದ್ಧವಾಗಿ ಕೆಲಸ ಮಾಡಲು ಹಾಗೂ ಬ್ರಿಟಿಷ್ ಬ್ಯಾಂಕ್ ಖಾತೆ ಬಳಸಲು ಅವಕಾಶವಿದೆ ಎನ್ನಲಾಗಿದೆ.
ಶುಕ್ರವಾರವಷ್ಟೇ ಮಹಾರಾಷ್ಟ್ರದ ರಾಯಗಢದಲ್ಲಿ 100 ಕೋಟಿ ರೂ. ಬೆಲೆಬಾಳುವ ಆತನ ಐಷಾರಾಮಿ ಬಂಗಲೆಯನ್ನು ನೆಲಸಮಗೊಳಿಸಲಾಗಿದೆ.