ಸ್ಮೃತಿ ಇರಾನಿ ಜೊತೆ ಅಸಭ್ಯ ವರ್ತನೆ: ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಕಾರನ್ನು ಹಿಂಬಾಲಿಸಿ, ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಮಂಗಳವಾರ ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.
ನವದೆಹಲಿ : ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಕಾರನ್ನು ಹಿಂಬಾಲಿಸಿ, ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು ಮಂಗಳವಾರ ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
2017ರ ಏಪ್ರಿಲ್'ನಲ್ಲಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚಾಣಕ್ಯಪುರದಲ್ಲಿನ ತಮ್ಮ ಮನೆಗೆ ಸ್ಮೃತಿ ಇರಾನಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ದೆಹಲಿ ವಿಶ್ವವಿದ್ಯಾನಿಲಯದ ನಾಲ್ವರು ವಿದ್ಯಾರ್ಥಿಗಳು ಕುಡಿದ ಮತ್ತಿನಲ್ಲಿ ಇರಾನಿ ಅವರ ಕಾರನ್ನು ಓವರ್ಟೇಕ್ ಮಾಡಲು ಯತ್ನಿಸಿದ್ದಲ್ಲದೆ, ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಇವರನ್ನು ಬಂಧಿಸಿದ್ದ ದೆಹಲಿ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.
ಭಾರತೀಯ ದಂಡ ಸಂಹಿತಿ ಕಾಯ್ದೆ 354 D ಮತ್ತು 509ರ ಅಡಿಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಾಗಿತ್ತು.
ಘಟನೆ ನಡೆದ ಸಂದರ್ಭದಲ್ಲಿ ಸ್ಮೃತಿ ಇರಾನಿ ಅವರು ಮೊದಲು ಪಿಸಿಆರ್ ಕರೆ ಮಾಡಿ, ನಂತರ ಚಾಣಕ್ಯಪುರಿ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರನ್ನು ದಾಖಲಿಸಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೆ, ವೈದ್ಯಕೀಯ ವರದಿಯ ಪ್ರಕಾರ, ಈ ನಾಲ್ವರೂ ವಿದ್ಯಾರ್ಥಿಗಳು ಮದ್ಯಪಾನ ಮಾಡಿರುವುದು ದೃಢಪಟ್ಟಿತ್ತು.