ನವದೆಹಲಿ: ಶಾಹೀನ್ ಬಾಗ್ ನಲ್ಲಿ ನಡೆಸಲಾಗುತ್ತಿರುವ ಧರಣಿ ಸತ್ಯಾಗ್ರಹ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ ಪ್ರತಿಭಟನೆಯಾಗಿದ್ದು, ದೇಶ ವಿರೋಧಿ ಶಕ್ತಿಗಳು ಅಲ್ಲಿ ಜಮಾಯಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾತನಾಡಿರುವ ಜಾವಡೆಕರ್ ಶಾಹೀನ್ ಬಾಗ್ ನಲ್ಲಿ ನಡೆಸಲಾಗುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಕೇಂದ್ರ ಸರ್ಕಾರ CAA ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಲಾಗುತ್ತಿದ್ದು, CAA ಎಂದಿಗೂ ಕೂಡ ವಾಪಸ್ ಪಡೆಯಲಾಗುವುದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಅಲ್ಲಿ  ಧರಣಿ ನಡೆಸುತ್ತಿರುವ ಜನರು ಧರಣಿ ನಡೆಸಲು ಯಾವುದೇ ಅನುಮತಿ ಪಡೆದುಕೊಂಡಿಲ್ಲ, ಅವರೇ ಅದನ್ನು ಮುಕ್ತಾಯಗೊಳಿಸಬೇಕು. ಅಷ್ಟೇ ಅಲ್ಲ ಝೀ ನ್ಯೂಸ್ ತಂಡದ ಮೇಲೆ ಹಲ್ಲೆ ನಡೆಸಿರುವ ಜನರನ್ನು ಪ್ರಜಾಪ್ರಭುತ್ವದ ಪಾಲಕರು ಎಂದು ಹೇಗೆ ಹೇಳಲಾಗುತ್ತದೆ? ಎಂದು ಪ್ರಶ್ನಿಸಿದ್ದಾರೆ.


ಇದಕ್ಕೂ ಮೊದಲು ಶನಿವಾರ ಈ ಕುರಿತು ಹೇಳಿಕೆ ನೀಡಿದ್ದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಮೋದಿ ಸರ್ಕಾರ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರ ಜೊತೆಗೆ ಮಾತುಕತೆಗೆ ಸಿದ್ಧವಾಗಿದೆ ಎಂದು ಹೇಳಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಸಚಿವರು ಇದನ್ನು ಸ್ಪಷ್ಟಪಡಿಸಿದ್ದರು.


ಈ ಕುರಿತು ಟ್ವೀಟ್ ಮಾಡಿದ್ದ ಪ್ರಸಾದ್, "ಸರ್ಕಾರ ಶಾಹೀನ್ ಬಾಗ್ ಪ್ರತಿಭಟನಾಕಾರರ ಜೊತೆಗೆ ಮಾತುಕತೆಗೆ ಸಿದ್ಧವಾಗಿದೆ. ಆದರೆ, ಅದು ಸುವ್ಯವಸ್ಥಿತವಾಗಿ ನಡೆಯಬೇಕು. ಮೋದಿ ಸರ್ಕಾರ ಅವರ ಜೊತೆಗೆ ಮಾತುಕತೆ ನಡೆಸಿ, CAAಗೆ ಸಂಬಂಧಿಸಿದಂತೆ ಅವರ ಭ್ರಮೆಯನ್ನು ದೂರಗೊಳಿಸಲು ಸಿದ್ಧವಾಗಿದೆ" ಎಂದು ಬರೆದುಕೊಂಡಿದ್ದರು.


ಕಳೆದ 50 ದಿನಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನಾಕಾರರು ದೆಹಲಿಯ ಶಾಹೀನ್ ಬಾಗ್ ಬಳಿ ರಸ್ತೆಗಿಳಿದು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಕಾಯ್ದೆಯ ಅಡಿ ಕೇಂದ್ರ ಸರ್ಕಾರ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ವಲಸೆ ಬಂದ ಶರಣಾರ್ಥಿಗಳಿಗೆ ಭಾರತೀಯ ನಾಗರಿಕತ್ವ ನೀಡಲು ನಿರ್ಧರಿಸಿದೆ.


ಈಗಾಗಲೇ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಈ ಕಾಯ್ದೆಗೆ ಅನುಮೊಂದನೆ ನೀಡಲಾಗಿದ್ದು, ಬಳಿಕ ದೆಹಲಿಯ ಜಾಮೀಯಾ ಮತ್ತು ಶಾಹೀನ್ ಬಾಗ್ ಪ್ರದೇಶಗಳಲ್ಲಿನ ಜನರು ಈ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ನಿರತರು ಈ ಕಾಯ್ದೆ ಒಂದು ಅಸಂವಿಧಾನಿಕ ಕಾಯ್ದೆಯಾಗಿದ್ದು, ಧಾರ್ಮಿಕ ಆಧಾರದ ಮೇಲೆ ತಾರತಮ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿದ್ದಾರೆ.