ದೇಶಾದ್ಯಂತ ಬಕ್ರೀದ್ ಸಂಭ್ರಮ; ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿಯಿಂದ ಶುಭಾಶಯ
ಬಕ್ರೀದ್ ಹಬ್ಬದ ಸಂಭ್ರಮದಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ್ದಾರೆ.
ನವದೆಹಲಿ: ಇಂದು ಇಡೀ ರಾಷ್ಟ್ರವೇ ಬಕ್ರೀದ್ ಹಬ್ಬವನ್ನು ಆಚರಿಸುತ್ತಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಷ್ಟ್ರಪತಿ ಕೊವಿಂದ್ ಅವರು, "ಭಾರತ ಮತ್ತು ವಿದೇಶದಲ್ಲಿರುವ ನಮ್ಮ ಎಲ್ಲಾ ಮುಸ್ಲಿಂ ಸಹೋದರ, ಸಹೋದರಿಯರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು. ಈ ಹಬ್ಬ ಪ್ರೀತಿ, ಭ್ರಾತೃತ್ವ ಮತ್ತು ಮಾನವೀಯತೆಯನ್ನು ಸಂಕೇತಿಸುತ್ತದೆ. ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುವ ಈ ಸಾರ್ವತ್ರಿಕ ಮೌಲ್ಯಗಳಿಗೆ ನಾವು ಬದ್ಧರಾಗೋಣ" ಎಂದು ತಿಳಿಸಿದ್ದಾರೆ.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಟ್ವೀಟ್ ಮಾಡಿದ್ದು, "ಈದ್ ಅಲ್-ಅಧಾ ಸಂದರ್ಭದಲ್ಲಿ ಎಲ್ಲರಿಗೂ ನನ್ನ ಶುಭಾಶಯಗಳು. ಇದು ನಮ್ಮ ಸಮಾಜದಲ್ಲಿ ಶಾಂತಿ ಮತ್ತು ಸಂತೋಷದ ಮನೋಭಾವವನ್ನು ಹೆಚ್ಚಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಈದ್ ಮುಬಾರಕ್!" ಎಂದು ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಎಲ್ಲರಿಗೂ 'ಈದ್ ಮುಬಾರಕ್' ಎಂದು ಶುಭ ಹಾರೈಸಿದ್ದಾರೆ.