ಇಂದು ಗರೀಬ್ ಕಲ್ಯಾಣ ರೋಜ್‌ಗಾರ್ ಅಭಿಯಾನಕ್ಕೆ ಚಾಲನೆ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕೇಂದ್ರ ಸಚಿವರ ಸಮ್ಮುಖದಲ್ಲಿ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರದ ಖಗೇರಿಯಾ ಜಿಲ್ಲೆಯ ತೆಲಿಹಾರ್ ಗ್ರಾಮದಿಂದ ಗರೀಬ್ ಕಲ್ಯಾಣ ರೋಜ್‌ಗಾರ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ನವದೆಹಲಿ: ಕರೋನಾವೈರಸ್ ಕೋವಿಡ್-19 (COVID-19) ಮತ್ತು ಲಾಕ್‌ಡೌನ್ (Lockdown) ಕಾರಣದಿಂದಾಗಿ ನಗರಗಳಿಂದ ಮತ್ತೆ ತಮ್ಮ ಗ್ರಾಮಗಳಿಗೆ ತೆರಳಿರುವ ವಲಸೆ ಕಾರ್ಮಿಕರಿಗೆ ಅವರವರ ಹಳ್ಳಿಗಳಲ್ಲೇ ಕೆಲಸ ಕೊಡುವ ಗರೀಬ್ ಕಲ್ಯಾಣ ರೋಜ್‌ಗಾರ್ ಅಭಿಯಾನಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಲಿದ್ದಾರೆ.
ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಜಾರ್ಖಂಡ್, ರಾಜಸ್ಥಾನ, ಒಡಿಶಾ ರಾಜ್ಯಗಳ 116 ಜಿಲ್ಲೆಗಳಲ್ಲಿ ಗರೀಬ್ ಕಲ್ಯಾಣ ರೋಜ್‌ಗಾರ್ ಯೋಜನೆ (Gareeb Kalyan Rojgar Yojna) ಜಾರಿಗೆ ತರಲಾಗುವುದು. ಇದರಿಂದ 25,000ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು (Migrant workers) ಅವರವರ ಹಳ್ಳಿಗಳಲ್ಲಿ ಉದ್ಯೋಗ ಸಿಗಲಿದೆ. ಯೋಜನೆಗಾಗಿ ಸುಮಾರು 50 ಸಾವಿರ ಕೋಟಿ ರೂಪಾಯಿಗಳನ್ನು ಬಳಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕೇಂದ್ರ ಸಚಿವರ ಸಮ್ಮುಖದಲ್ಲಿ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರದ ಖಗೇರಿಯಾ ಜಿಲ್ಲೆಯ ತೆಲಿಹಾರ್ ಗ್ರಾಮದಿಂದ ಗರೀಬ್ ಕಲ್ಯಾಣ ರೋಜ್‌ಗಾರ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಯೋಜನೆ ಜಾರಿಯಲ್ಲಿರುವ ಜಿಲ್ಲೆಯ ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಕೃಷಿ ವಿಜ್ಞಾನ ಇಲಾಖೆಗಳ ಸಹಯೋಗದಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತದೆ ಎಂದೂ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗರೀಬ್ ಕಲ್ಯಾಣ ರೋಜ್‌ಗಾರ್ ಅಭಿಯಾನದ ಮೂಲಕ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. 25 ರೀತಿಯ ಬೇರೆ ಬೇರೆ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗುವಂತೆ ಹಾಗೂ ವಲಸಿಗರು ಮತ್ತು ಗ್ರಾಮೀಣ ಭಾಗದ ಬಡ ಜನರಿಗೆ ಸಹಕಾರಿಯಾಗುವಂತೆ ಯೋಜನೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕೃಷಿ, ಟೆಲಿಕಾಂ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕೆಲಸ, ಗಣಿ, ಕುಡಿಯುವ ನೀರು, ನೈರ್ಮಲ್ಯ, ಪರಿಸರ, ರೈಲ್ವೆ, ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗಡಿ ರಸ್ತೆಗಳಿಗೆ ಸಂಬಂಧಿಸಿದ 12 ಇಲಾಖೆಗಳ ಸಂಘಟಿತ ಪ್ರಯತ್ನದ ಮೂಲಕ ಈ ಯೋಜನೆಯನ್ನು ನಡೆಸಲಾಗುವುದು.