ರೈತರ ಆತ್ಮಹತ್ಯೆ: ಯೋಗಿ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ
ಉತ್ತರ ಪ್ರದೇಶದಲ್ಲಿನ ರೈತರ ಆತ್ಮಹತ್ಯೆ ವಿಚಾರವಾಗಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ: ಉತ್ತರ ಪ್ರದೇಶದಲ್ಲಿನ ರೈತರ ಆತ್ಮಹತ್ಯೆ ವಿಚಾರವಾಗಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಈಗ ರಾಜ್ಯದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ ರಾಜ್ಯ ಸರ್ಕಾರದ ಕೃಷಿ ಹಾಗೂ ಸಾಲ ಮನ್ನಾ ಸಂಬಂಧಿತ ಯೋಜನೆಗಳನ್ನು ಪ್ರಶ್ನಿಸಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಬುಂಡೇಲ್‌ಖಂಡ್‌ನ ಬಂಡಾದಲ್ಲಿ ಐವರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಮಾಧ್ಯಮದ ವರದಿಯನ್ನು ಉಲ್ಲೇಖಿಸಿ "ರೈತರು ಬೆಳೆ ಬೆಳೆಯುತ್ತಾರೆ, ಅದಕ್ಕೆ ಬೆಲೆ ಸಿಗುವುದಿಲ್ಲ. ಬರಗಾಲ ಉಂಟಾದರೆ, ಪರಿಹಾರ ಸಿಗುವುದಿಲ್ಲ" ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
"ಬುಂದೇಲ್‌ಖಂಡ್‌ನ ರೈತರಿಗೆ ಪ್ರತಿದಿನ ಮುಟ್ಟುಗೋಲು ಹಾಕುವ ಬೆದರಿಕೆಗಳು ಬರುತ್ತಿವೆ. ಹಾಗಾದರೆ ರಾಜ್ಯದಲ್ಲಿ ಯಾವ ರೀತಿ ಕೃಷಿ ನೀತಿ ಮತ್ತು ಸಾಲಮನ್ನ ಯೋಜನೆಗಳಿದ್ದಾವೆಂದರೆ ರೈತರಿಗೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇತ್ತೀಚಿಗೆ ಸೋನಭದ್ರಾ ಹತ್ಯಾಕಾಂಡದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಪ್ರಿಯಾಂಕಾ ಗಾಂಧಿ ,ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಲು ಪಟ್ಟು ಹಿಡಿದು ಬಂಧನವಾಗಿದ್ದರು. ಆದರೆ ಇದಕ್ಕೆ ಜಪ್ಪಯ್ಯ ಎನ್ನದೇ ತಮ್ಮ ನಿರ್ಧಾರಕ್ಕೆ ಬದ್ದವಾದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಸಂತ್ರಸ್ತ ಕುಟುಂಬಗಳನ್ನೇ ಸರ್ಕಾರ ಅವರ ಬಳಿ ಕಳಿಸಿತ್ತು. ಇದಾದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಕೂಡ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು.