ಲಕ್ನೋ: ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ ನೇಮಕಗೊಂಡ ಬಳಿಕ ರಾಜ್ಯ ರಾಜಧಾನಿ ಲಕ್ನೋಗೆ ಆಗಮಿಸಲಿರುವ ಪ್ರಿಯಾಂಕಾ ಗಾಂಧಿ ಮೊದಲ ಮೆಗಾ ರೋಡ್ ಶೋ ನಡೆಸಲಿದ್ದಾರೆ.


COMMERCIAL BREAK
SCROLL TO CONTINUE READING

ಲಕ್ನೋದಲ್ಲಿ ಸೋಮವಾರ ಪ್ರಿಯಾಂಕಾ ಗಾಂಧಿಯವರೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಕ್ಷದ ಹಿರಿಯ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಸಾಥ್ ನೀಡಲಿದ್ದಾರೆ.


ಲೋಕಸಭಾ ಸಮರದ ಹಿನ್ನೆಲೆಯಲ್ಲಿ ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ ವಹಿಸಿಕೊಂಡಿರುವ ಪ್ರಿಯಾಂಕ ಗಾಂಧಿಯವರಿಗೆ ಅದ್ಧೂರಿ ಸ್ವಾಗತ ನೀಡಲು ಪಕ್ಷದ ಕಾರ್ಯಕರ್ತರು ತಯಾರಿ ನಡೆಸಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ (ಯುಪಿಸಿಸಿ) ಮುಖ್ಯಸ್ಥ ರಾಜ್ ಬಬ್ಬರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಪ್ರಮುಖ ನಾಯಕರನ್ನು ಸ್ವಾಗತಿಸಲು ಅದ್ಧೂರಿ ವ್ಯವಸ್ಥೆಗಳನ್ನು ಮಾಡಿದ್ದಾರೆ.


ವರದಿಗಳ ಪ್ರಕಾರ, ರಾಹುಲ್, ಪ್ರಿಯಾಂಕಾ ಮತ್ತು ಸಿಂಧಿಯಾ ಲಕ್ನೋ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ಪ್ರಮುಖ ರಸ್ತೆಗಳ ಮೂಲಕ ನೆಹರು ಭವನ್ ನಲ್ಲಿರುವ ಯುಪಿಸಿಸಿ ಕಚೇರಿ ತಲುಪಲಿದ್ದಾರೆ.


ವಿಮಾನ ನಿಲ್ದಾಣ ಮತ್ತು ಯುಪಿಸಿಸಿ ಕಚೇರಿಯ ನಡುವೆ ಸುಮಾರು 37 ಪ್ರಮುಖ ವೃತ್ತಗಳಲ್ಲಿ ಪಕ್ಷದ ಕಾರ್ಯಕರ್ತರು ನಾಯಕರಿಗೆ ಸ್ವಾಗತ ಕೋರಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಅನ್ಸು ಅವಸ್ತಿ ತಿಳಿಸಿದ್ದಾರೆ.


ಕಾಂಗ್ರೆಸ್ ಕಚೇರಿಯನ್ನು ತಲುಪುವ ಮೊದಲು ಕಾಂಗ್ರೆಸ್ ಮುಖಂಡರು ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪ್ರತಿಮೆಗಳಿಗೆ ಪುಷ್ಪಮಾಲೆ ಹಾಕಿ ನಮಿಸುವರು ಎನ್ನಲಾಗಿದೆ.


ಇನ್ನು ಮಾರ್ಗ ಮಧ್ಯದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಪಕ್ಷದ ಹಲವು ಮುಖಂಡರ ಫ್ಲೆಕ್ಸ್ ಗಳು ರಾರಾಜಿಸುತ್ತಿದ್ದು,  "ವಕ್ತ್ ಹೈ ಬಾದ್ಲಾವ್ ಕಾ" ಎಂಬ ಬ್ಯಾನರ್ ಗಳನ್ನೂ ಹಾಕಲಾಗಿದೆ.