ಕಾಂಗ್ರೆಸ್ ಅಧ್ಯಕ್ಷೆಯಾಗಲು ಪ್ರಿಯಾಂಕಾ ಗಾಂಧಿ ವಾದ್ರಾ ಅರ್ಹರು: ಅಮರಿಂದರ್ ಸಿಂಗ್
ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳಲು ಪ್ರಿಯಾಂಕ ಗಾಂಧಿ ಉತ್ತಮ ಆಯ್ಕೆಯಾಗಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.
ನವದೆಹಲಿ: ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ಪ್ರಿಯಾಂಕ ಗಾಂಧಿ ವಾದ್ರಾ ಅವರು ಅರ್ಹ ವ್ಯಕ್ತಿಯಾಗಿದ್ದಾರೆ. ಅವರು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರೆ ಸರ್ವತೋಮುಖ ಬೆಂಬಲ ಸಿಗಲಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೋಮವಾರ ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಪ್ರಿಯಾಂಕಾ ಗಾಂಧಿ ಉತ್ತಮ ಆಯ್ಕೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಂಗ್, ಭಾರತ ಯುವ ರಾಷ್ಟ್ರ, ಯುವಜನತೆಗೆ ಸ್ಪಂದಿಸುತ್ತದೆ ಎಂದು ಹೇಳಿದರು.
"ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳಲು ಪ್ರಿಯಾಂಕ ಗಾಂಧಿ ಉತ್ತಮ ಆಯ್ಕೆಯಾಗಿದ್ದಾರೆ. ಆದರೆ, ಇದೆಲ್ಲವೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ ಹಾಗೂ ಎಲ್ಲ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಹೊಂದಿದೆ" ಎಂದು ಅಮರಿಂದರ್ ಸಿಂಗ್ ಹೇಳಿದರು.
ಭಾರತದ ಬಹುಪಾಲು ಜನಸಂಖ್ಯೆಯು ಈಗ ಯುವಕರನ್ನು ಒಳಗೊಂಡಿರುವುದರಿಂದ, ಯುವ ನಾಯಕರು ಮಾತ್ರ ಜನರೊಂದಿಗೆ ಸಂಪರ್ಕ ಸಾಧಿಸಿ, ಅವರ ಆಕಾಂಕ್ಷೆಗಳನ್ನು, ನಿರೀಕ್ಷೆಗಳನ್ನು ಈಡೇರಿಸಲು ಸಾಧ್ಯ ಎಂದಿದ್ದಾರೆ.
ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ, ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಳಿಕ ಪಕ್ಷವನ್ನು ಪುನರ್ ನಿರ್ಮಿಸಲು ಕ್ರಿಯಾತ್ಮಕ ಯುವ ನಾಯಕನ ಅಗತ್ಯವಿರುವುದರಿಂದ ಪಕ್ಷದ ಮುಖ್ಯಸ್ಥರಾಗಲು ಪ್ರಿಯಾಂಕಾ ಸೂಕ್ತ ವ್ಯಕ್ತಿಯಾಗಿದ್ದಾರೆ. ದೇಶದ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸವಾಲುಗಳನ್ನು ಎದುರಿಸುವ ಬುದ್ದಿವಂತಿಕೆ ಅವರಲ್ಲಿದೆ. ಅಲ್ಲದೆ, ಯಾವುದೇ ಹೋರಾಟವನ್ನು ವಿಜಯದತ್ತ ಕೊಂಡೊಯ್ಯುವ ಧೈರ್ಯವೂ ಅವರಲ್ಲಿದೆ ಎಂದು ಅಮರಿಂದರ್ ಸಿಂಗ್ ಹೇಳಿದರು.