ಮುಂಬೈ: ಕಾಂಗ್ರೆಸ್ ಶಾಸಕ ನಿತೇಶ್ ರಾಣೆ ಮತ್ತು ಅವರ 18 ಬೆಂಬಲಿಗರಿಗೆ ಮಹಾರಾಷ್ಟ್ರದ ಸಿಂಧುದುರ್ಗ್ ಜಿಲ್ಲೆಯ ಕಂಕವಲಿ ನ್ಯಾಯಾಲಯ ಮಂಗಳವಾರ 14 ದಿನಗಳ ನ್ಯಾಯಾಂಗಬಂಧನ ವಿಧಿಸಿದೆ.


COMMERCIAL BREAK
SCROLL TO CONTINUE READING

ಪಿಡಬ್ಲ್ಯುಡಿ ಎಂಜಿನಿಯರ್ ಮೇಲೆ ಹಲ್ಲೆ ನಡೆಸಿ ಆತನ ಮೇಲೆ ಮಣ್ಣು ಸುರಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್ ಶಾಸಕ ನಿತೇಶ್ ರಾಣೆ ಮತ್ತು ಅವರ ಬೆಂಬಲಿಗರನ್ನು ಜುಲೈ 9ರವರೆಗೆ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ನೀಡಿತ್ತು. ಇಂದು ಪೊಲೀಸ್ ಕಸ್ಟಡಿ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಹೀಗಾಗಿ ನಿತೇಶ್ ರಾಣೆ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ ದೊರೆತಂತಾಗಿದೆ. 


ಮಹಾರಾಷ್ಟ್ರ-ಗೋವಾ ನಡುವಿನ ಕಂಕವ್ಲಿ ಹೆದ್ದಾರಿಯ ರಸ್ತೆ ವೀಕ್ಷಣೆಗೆ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಪುತ್ರ ನಿತೇಶ್ ನಾರಾಯಣ್ ರಾಣೆ ಜುಲೈ 4ರಂದು ತೆರಳಿದ್ದರು. ಈ ವೇಳೆ ರಸ್ತೆ ಗುಂಡಿಗಳನ್ನು ಕಂಡು ನಿತೇಶ್ ರಾಣೆ ಎಂಜಿನಿಯರ್  ಮೇಲೆ ಹಲ್ಲೆ ನಡೆಸಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.



ನಿತೇಶ್  ನಾರಾಯಣ ರಾಣೆ ಹಾಗೂ ಕಂಕವ್ಲಿ  ಪಾಲಿಕೆ ಅಧ್ಯಕ್ಷ ಸಮಿರ್ ನಾಲ್ವಾಡೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉಪ ಎಂಜಿನಿಯರ್ ಪ್ರಕಾಶ್ ಖೆಡೇಕರ್ ಮೇಲೆ ಕೆಸರು ಸುರಿದು ಬ್ರಿಡ್ಜ್ ಗೆ ಕಟ್ಟಿ ಹಾಕಲು ಪ್ರಯತ್ನಿಸಿದ್ದು ವೀಡಿಯೋದಲ್ಲಿ ಸೆರೆಯಾಗಿತ್ತು. ಬಳಿಕ ಕಾಂಗ್ರೆಸ್ ಶಾಸಕ ನಿತೇಶ್ ರಾಣೆ ಮತ್ತವರ ಬೆಂಬಲಿಗರನ್ನು ಬಂಧಿಸಿದ್ದ ಪೊಲೀಸರು ಐಪಿಸಿ ಸೆಕ್ಷನ್ 353, 342, 332, 324, 323, 120(ಎ), 147, 143, 504, ಹಾಗೂ 506ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು.