ನವದೆಹಲಿ: ಭಾರತಿಯ ವಾಯು ಸೇನೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.


COMMERCIAL BREAK
SCROLL TO CONTINUE READING

ವಾಯುಪಡೆಯ ಮುಖ್ಯಸ್ಥರಾಗಿರುವ ಬಿಎಸ್‌ ಧನೋವಾ ಇಂದು ನಿವೃತ್ತರಾದ ಹಿನ್ನೆಲೆಯಲ್ಲಿ ಭದೌರಿಯಾ ಅವರು ನೂತನ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಇವರಿಗೆ ನಿರ್ಗಮಿತ ಮುಖ್ಯಸ್ಥ ಧನೋವಾ ಅವರು ಅಧಿಕಾರ ಹಸ್ತಾಂತರಿಸಿದರು. 


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭಾದೌರಿಯಾ, "ರಫೇಲ್ ಬಹಳ ಸಮರ್ಥ ವಿಮಾನ. ಇದು ನಮ್ಮ ಕಾರ್ಯಾಚರಣೆಯ ಸಾಮರ್ಥ್ಯದಲ್ಲಿ ಗೇಮ್ ಚೇಂಜರ್ ಆಗಲಿದೆ. ಇದು ಪಾಕಿಸ್ತಾನ ಮತ್ತು ಚೀನಾಕ್ಕಿಂತ ಭಾರತದ ವಾಯುಸೇನೆಯ ಬಲವನ್ನ ಹೆಚ್ಚಿಸುತ್ತದೆ" ಎಂದರು.



ಇದೇ ವೇಳೆ, ಭವಿಷ್ಯದಲ್ಲಿ ಬಾಲಕೋಟ್ ವೈಮಾನಿಕ ದಾಳಿಯಂತಹ ಮತ್ತೊಂದು ವಾಯುದಾಳಿ ನಡೆಸಲು ವಾಯುಸೇನೆ ಉತ್ತಮವಾಗಿ ಸಿದ್ಧವಾಗಿದೆ. ಅಲ್ಲದೆ, ಎಂಥಹದ್ದೇ ಸಂದರ್ಭದಲ್ಲಿ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಹೇಳಿದರು.  



1980, ಜೂನ್‌ 15ರಂದು ವಾಯುಪಡೆಗೆ ಸೇರಿಕೊಂಡ ಭದೌರಿಯಾ ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದಾರೆ. ಪೈಲಟ್‌ ಆಗಿ 4000ಕ್ಕೂ ಹೆಚ್ಚು ಗಂಟೆಗಳ ಕಾಲ ಯುದ್ಧ ವಿಮಾನ ಹಾರಾಟ ನಡೆಸಿ ಅಪಾರ ಅನುಭವ ಹೊಂದಿದ್ದಾರೆ. ಬೆಂಗಳೂರು ಮೂಲದ ಐಎಎಫ್‌ ಕಮಾಂಡ್‌ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿರುವ ಭದೌರಿಯಾ, ಅನಿಲ್‌ ಖೋಸ್ಲಾ ನಂತರ ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥರಾಗಿ ಭದೌರಿಯಾ ಜವಾಬ್ದಾರಿ ನಿರ್ವಹಿಸಿದ್ದರು. ಫ್ರಾನ್ಸ್‌ ಜತೆಗಿನ ರಫೇಲ್‌ ಯುದ್ಧ ವಿಮಾನ ಖರೀದಿ ಮಾತುಕತೆ ಸಂದರ್ಭದಲ್ಲಿ ಭದೌರಿಯಾ ಪ್ರಮುಖ ಪಾತ್ರ ವಹಿಸಿದ್ದರು.